ಮಡಿಕೇರಿ, ಸೆ. 1 : ಕೊಡವರ ಬಂದೂಕು ವಿನಾಯಿತಿ ಕಸಿಯುವ ಸಂಚು ರೂಪುಗೊಳ್ಳುತ್ತಿದ್ದು, ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೊಡವರ ಶಶಸ್ತ್ರ ಹೊಂದಲಿರುವ ವಿನಾಯಿತಿ ಹಕ್ಕಿನ ಧೀಶಕ್ತಿ ದಿನವೆಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಮಂದ್‍ನಲ್ಲಿ ಬಂದೂಕನ್ನು ಬಹಿರಂಗ ಪೂಜಿಸುವ ಮೂಲಕ ವಾಹನ ಮೆರವಣಿಗೆ ಯೊಂದಿಗೆ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜತೆಗೆ ಬಂದೂಕು ವಿನಾಯಿತಿ ಹಕ್ಕು ರದ್ದು ಮಾಡದಂತೆ ನಿರ್ಣಯ ಕೈಗೊಳ್ಳಲಾಯಿತು.
ಭಾರತದ ಶಸಸ್ತ್ರ ಕಾಯ್ದೆ 1959 ರ ಸೆಕ್ಷನ್ 3 ಮತ್ತು 4 ರನ್ವಯ ಬಂದೂಕನ್ನು ಲೈಸನ್ಸ್ ಇಲ್ಲದೆ ಹೊಂದಲು ಕೊಡವರಿಗಿರುವ ಮತ್ತು ಜಮ್ಮಾ ಹಿಡುವಳಿದಾರರಿಗಿರುವ ವಿಶೇಷ ಹಕ್ಕನ್ನು ಕಸಿದುಕೊಳ್ಳಲು ಹೈ ಕೋರ್ಟ್‍ನಲ್ಲಿ ರಿಟ್ ಅರ್ಜಿ ಮೂಲಕ ಒಳಸಂಚು ರೂಪಿಸಲಾಗುತ್ತಿದೆ. ಕೊಡವರ ರಾಜ್ಯಾಂಗದತ್ತ ಮಾನವ ಹಕ್ಕು ಕಸಿದುಕೊಳ್ಳಲು ನಡೆಸಿದ ಪಿತೂರಿ ಇದಾಗಿದೆ. ಬಂದೂಕು ಕೊಡವರ ಧಾರ್ಮಿಕ ಸಂಕೇತ ಹಾಗೂ ಸಾಂಸ್ಕøತಿಕ ಲಾಂಛನವಾಗಿದ್ದು ಈ ಹಕ್ಕು ಅಬಾಧಿತವಾಗಿ ಮುಂದುವರೆಯ ಬೇಕೆಂದು ಸಿಎನ್‍ಸಿ ಒತ್ತಾಯಿಸಿದೆ. ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನಿರ್ಣಯ ಮಂಡಿಸಿದರು.
ಭಾರತ ಸರ್ಕಾರಕ್ಕೆ ಕೊಡವರ ಶಸಸ್ತ್ರ ವಿನಾಯಿತಿ ಹಕ್ಕಿನ ಮಹತ್ವದ ಬಗ್ಗೆ ಜ್ಞಾಪನಾ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸಲ್ಲಿಸಲಾಯಿತು. ಕಲಿಯಂಡ ಪ್ರಕಾಶ್ ಸ್ವಾಗತಿಸಿದರು. ಅಜ್ಜಿಕುಟ್ಟಿರ ಲೋಕೇಶ್ ವಂದಿಸಿ, ನಂದಿನೆರವಂಡ ನಿಶಾ ಅಚ್ಚಯ್ಯ, ಪ್ರಾರ್ಥಿಸಿದರು.