ಕುಶಾಲನಗರ, ಆ. 31: ಸಚಿವ ಸುರೇಶ್ ಕುಮಾರ್ ಹಾರಂಗಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿ ಮತ್ತು ಅಣೆಕಟ್ಟು ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆ ಬಗ್ಗೆ ಮಾಹಿತಿ ಪಡೆದ ಸಚಿವರು ಜಲಾಶಯದ ಗರಿಷ್ಠ ನೀರಿನ ಮಟ್ಟ, ಅಣೆಕಟ್ಟಿನ ಎತ್ತರ ಸೇರಿದಂತೆ ನಿರ್ವಹಣೆ ಬಗ್ಗೆ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಮಂಜುನಾಥ್ ವಿವರ ಪಡೆದರು. ಅಣೆಕಟ್ಟೆ ಆವರಣದಲ್ಲಿ ಅಳವಡಿಸಿರುವ ಆಧುನಿಕ ತಂತ್ರಜ್ಞಾನದ ಉಪಗ್ರಹ ಆಧಾರಿತ ಟೆಲಿಮೆಟ್ರಿಕ್ ವಾಟರ್‍ಗೇಜ್, ಮಳೆ ಮಾಪನ ಯಂತ್ರದ ಬಗ್ಗೆ ಮಾಹಿತಿ ತಿಳಿದರು.

ಇದೇ ಸಂದರ್ಭ ಜಲಾಶಯದ ಆವರಣದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಸಚಿವರು ಉತ್ಪಾದನ ಸಾಮಥ್ರ್ಯ ಸೇರಿದಂತೆ ಸರಬರಾಜು ಬಗ್ಗೆ ಅಲ್ಲಿನ ವ್ಯವಸ್ಥಾಪಕ ನಿರ್ದೇಶಕ ಸುಬ್ರಮಣ್ಯಂ ಅವರೊಂದಿಗೆ ಮಾಹಿತಿ ಕಲೆ ಹಾಕಿದರು. ಈ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಮತ್ತಿತರ ಅಧಿಕಾರಿಗಳು ಇದ್ದರು.