ಶನಿವಾರಸಂತೆ, ಆ. 31: ಸಮೀಪದ ಬಾಣವಾರ ಅರಣ್ಯದ ಗಿರಿಜನ ಹಾಡಿಯ 13 ಮಕ್ಕಳಿಗೆ ಕೆಂಪೇಗೌಡ್ರು ಸೇನೆ ಸಂಘಟನೆಯ ರಾಜ್ಯ ಘಟಕದ ವತಿಯಿಂದ ನೋಟ್ ಪುಸ್ತಕ, ಬ್ಯಾಗ್, ಲೇಖನಿ ಸಾಮಗ್ರಿ, ಶೂಸ್‍ಗಳನ್ನು ವಿತರಿಸಲಾಯಿತು. ಸೇನೆ ಸಂಘಟನೆ ಸಂಸ್ಥಾಪಕ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬೆಂಗಳೂರಿನ ಎನ್. ರವಿಕುಮಾರ್, ಶಿಕ್ಷಣ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಸಂಘಟನೆ ಶಿಕ್ಷಣ ಮತ್ತು ಸಾಮಾಜಿಕ ಸೇವೆ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದೆ. ಗ್ರಾಮೀಣ ಭಾಗದ ಕಡುಬಡತನದ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಕೆ ಕಲಿಕೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದೆ ಎಂದರು. ರಾಜ್ಯ ಘಟಕದ ಕಾರ್ಯದರ್ಶಿ ರಾಜೇಶ್ ಗೌಡ ಮಾತನಾಡಿ, ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಕುಗ್ರಾಮಗಳಿಗೆ, ಗಿರಿಜನರ ಹಾಡಿಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅರಿತು, ಬಡವರ್ಗದ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು. ಈ ಸಂದರ್ಭ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಮೋದರ್, ಬೆಂಗಳೂರು ದಕ್ಷಿಣ ಕ್ಷೇತ್ರ ಯುವ ಘಟಕದ ಅಧ್ಯಕ್ಷ ರಾಜೇಶ್, ಸಂಘಟನಾ ಕಾರ್ಯದರ್ಶಿ ಅರುಣ್, ಕಾರ್ಯಕರ್ತರಾದ ಪವನ್, ರಘು, ಮಧು, ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಚೈಲ್ಡ್‍ಲೈನ್ ಸಂಸ್ಥೆ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.