ಶನಿವಾರಸಂತೆ, ಆ. 31: ಸಮೀಪದ ಕೊಡ್ಲಿಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಶಿಕ್ಷಕಿ ಉಷಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಣೆಗೆ ಟ್ಯೂಷನ್ ಕಾರ್ಯಕ್ರಮವನ್ನು ಆಯೋಜಿಸಿದೆ. ಉತ್ತಮ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳನ್ನು ಜವಾಬ್ದಾರಿಯಿಂದ ಕಳುಹಿಸಿಕೊಡಲಾಗುವದು ಎಂದರು.
ಯೋಜನೆಯ ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಮೇಶ್ ಮಾತನಾಡಿ, ಡಾ. ವೀರೇಂದ್ರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ 32 ವರ್ಷಗಳಿಂದ ನಡೆದು ಬರುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯಡಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ತರಬೇತಿ ಸಂಸ್ಥೆಗಳು, ಸಿರಿಸಂಸ್ಥೆ, ಸಮುದಾಯ ಅಭಿವೃದ್ಧಿ ವಿಭಾಗ, ಜನಜಾಗೃತಿ ವೇದಿಕೆ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಜತೆಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಮುಖೇನ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗುವಂತೆ ಮಾಡಲಾಗಿದೆ. ವಾರದಲ್ಲಿ 5 ದಿನ ನೀಡುವ ಟ್ಯೂಷನ್ ಕಾರ್ಯಕ್ರಮದಲ್ಲೂ ಶಿಕ್ಷಕರನ್ನು ಪ್ರೇರಕರಾಗಿ ನಿಯೋಜಿಸಿ ಗೌರವಧನ ಕೊಡಲಾಗುವದು ಎಂದರು.
ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟದ ಅಧ್ಯಕ್ಷೆ ಪಂಕಜ ಮಾತನಾಡಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ಭಗವಾನ್, ಸಿ.ಹೆಚ್.ಸಿ. ಪ್ರಬಂಧಕ ಸದಾಶಿವ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯ ಶೇಖರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರಾದ ಬಸಪ್ಪ, ನಟರಾಜು, ಗೌರಮ್ಮ, ಸುಮತಿ, ರಾಕೇಶ್, ನಾಗರಾಜ್, ಉಷಾದೇವಿ, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.