ಸುಂಟಿಕೊಪ್ಪ, ಆ. 31: ಎಳೆಯ ಮಗುವಿನಲ್ಲಿ ಅತಿಯಾದ ಭೇದಿಯನ್ನು ನಿಯಂತ್ರಿಸುವ ದಿಸೆಯಲ್ಲಿ ಪ್ರತಿ ಮಗುವಿಗೆ 3 ಹಂತದಲ್ಲಿ ಮಕ್ಕಳಿಗೆ ರೋಟಾ ವೈರಸ್ ಲಸಿಕೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ವಿತರಿಸಲಾಗುತ್ತದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಹೇಳಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟಾ ವೈರಸ್‍ನಿಂದ ಮಗುವಿನಲ್ಲಿ ಭೇದಿ ಕಂಡು ಬರುತ್ತಿದ್ದು ಮಗುವು ಕೂಡಲೇ ನಿತ್ರಾಣಗೊಳ್ಳುವದು ಇದನ್ನು ತಡೆಗಟ್ಟುವ ಔಷಧಿಯು ದುಬಾರಿ ಬೆಲೆದಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆಗೆ ಒಳಗಾದ ಮಗುವಿಗೆ ರೋಟಾ ವೈರಸ್ ಚುಚ್ಚು ಮದ್ದನ್ನು ಬಳಕೆಗೊಳಿಸಲಾಗುತ್ತಿತ್ತು ಸರಕಾರವು ರೋಟಾ ವೈರಸ್ ಔಷಧಿಯ ಪರಿಣಾಮವನ್ನು ಮನಗಂಡು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ 3 ಹಂತದಲ್ಲಿ ರೋಟಾ ವೈರಸ್ ಲಸಿಕೆಯನ್ನು ಬಳಕೆಗೆ ತರಲಾಗಿದೆ. ಇಂದಿನಿಂದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ದೊರೆಯಲಿದೆ ಎಂದು ಡಾ. ಪ್ರಾಣೇಶ್ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ವಹಿಸಿದ್ದರು. ಮಗುವಿಗೆ ಲಸಿಕೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಒಂದೂವರೆ ತಿಂಗಳು, ಎರಡೂವರೆ ತಿಂಗಳು, ಮೂರುವರೆ ತಿಂಗಳು ವಯೋಮಾನದ 14 ಮಗುವಿಗೆ ಲಸಿಕೆಯನ್ನು ನೀಡಲಾಯಿತು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಡಾ. ಜೀವನ್, ಗ್ರಾ.ಪಂ. ಸದಸ್ಯೆ ಜ್ಯೋತಿ ಹಾಗೂ ದಾದಿಯರು ಮತ್ತಿತರರು ಇದ್ದರು.