ಗೋಣಿಕೊಪ್ಪ ವರದಿ, ಆ. 31: ನೊಕ್ಯ, ದೇವರಪುರ, ಮಾಯಮುಡಿ ಭಾಗದ ಗ್ರಾಮಗಳಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಇಲ್ಲಿನ ಕೃಷಿಕರಿಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನ ಸಿಗದೆ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.

ಗ್ರಾಮದೊಳಗೆ ಬಿಡಾರ ಹೂಡಿರುವ ಕಾಡಾನೆಗಳನ್ನು ಕಾಡಿ ಗಟ್ಟಲು ಪ್ರಾದೇಶಿಕ ಅರಣ್ಯ ಹಾಗೂ ವನ್ಯಜೀವಿ ಇಲಾಖೆ ಜವಬ್ದಾರಿ ಹೊತ್ತುಕೊಳ್ಳುತ್ತಿಲ್ಲ. ಎರಡೂ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸೇರಿಲ್ಲ ಎಂಬ ಕಾರಣ ನೀಡಿ ಜವಾಬ್ದಾರಿಯಿಂದ ಪಾರಾಗುತ್ತಿದ್ದಾರೆ ಎಂಬದು ಗ್ರಾಮಸ್ಥರ ಆರೋಪವಾಗಿದೆ.

ತಿತಿಮತಿ ಪ್ರಾದೇಶಿಕ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದರೆ, ವನ್ಯಜೀವಿ ಅರಣ್ಯದಿಂದ ಬರುವದನ್ನು ಅವರೇ ನಿಯಂತ್ರಿಸಬೇಕು ಎಂಬ ಉತ್ತರ ಅಧಿಕಾರಿಗಳಿಂದ ದೊರೆ ಯುತ್ತಿದೆ.

ಗ್ರಾಮದ ಆನೆಗಳನ್ನು ಹೊರ ಅಟ್ಟುವ ಯೋಜನೆಗೂ ಮುಂದಾ ಗುತ್ತಿಲ್ಲ. ವನ್ಯಜೀವಿ ವಲಯ ಅಧಿಕಾರಿಗಳಿಗೆ ದೂರು ನೀಡಿದರೆ, ಪ್ರಾದೇಶಿಕ ಅರಣ್ಯದಲ್ಲಿರುವ ಆನೆಗಳನ್ನು ನಾವು ಹೊರಗೆ ಅಟ್ಟಲು ನಿಯಮ ಸರಿ ಹೊಂದುವದಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ನಂತರ ರೈಲ್ವೇ ಬ್ಯಾರಿಕೇಡ್ ದ್ವಾರವನ್ನು ಮುಚ್ಚದೆ ಇರುವದು ಸಮಸ್ಯೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಮಾಯಮುಡಿ ಗ್ರಾಮದ ಕಡೆಯಿಂದ ರಾತ್ರಿ ಸಮಯದಲ್ಲಿ ಆನೆಗಳು ನೊಕ್ಯ ಭಾಗಕ್ಕೆ ಬಂದು ಬೆಳೆ ನಾಶ ಮಾಡುತ್ತಿವೆ. ನಂತರ ಅಲ್ಲಿನ ಚೆಪ್ಪುಡೀರ ಜಾಗದಲ್ಲಿ ಬೀಡುಬಿಟ್ಟಿರುತ್ತವೆ. ಇಲ್ಲಿನ ಗ್ರಾಮಸ್ಥರು ಆತಂಕ ಪರಿಸ್ಥಿತಿಯಲ್ಲಿ ದಿನಕಳೆಯು ವಂತೆ ಆಗಿದೆ. ಕಾಡಾನೆಗಳು ಕಾಡಿಗೆ ತೆರಳದೆ ಗ್ರಾಮಗಳಲ್ಲೇ ಓಡಾಡಿಕೊಂಡಿವೆ.

ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ಟೀಂ ಸಿಬ್ಬಂದಿ ಕೂಡ ವನ್ಯಜೀವಿ ವಲಯಕ್ಕೆ ನಿಯೋಜನೆಗೊಂಡಿರುವದರಿಂದ ಗ್ರಾಮಕ್ಕೆ ಬರುವ ಆನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ತಿತಿಮತಿ ಪ್ರಾದೇಶಿಕ ವಲಯದಲ್ಲಿ ಸಿಬ್ಬಂದಿ ಕೊರತೆಯಿಂದ ರ್ಯಾಪಿಡ್ ರೆಸ್ಪಾನ್ಸ್ ಟೀಂ ನಿರ್ವಹಣೆ ಸಾಧ್ಯವಾಗುತ್ತಿಲ್ಲ.

ಅರಣ್ಯದಿಂದ ಬರುವ ಆನೆಗಳು ಗ್ರಾಮಕ್ಕೆ ನುಸುಳದಂತೆ ಸುಮಾರು ರೂ. 98 ಲಕ್ಷ ವೆಚ್ಚದಲ್ಲಿ ನೊಕ್ಯ ಗ್ರಾಮದ ಜಯಪುರ ತೋಟದಿಂದ ಕುಂಞÂರಾಮನಕಟ್ಟೆವರೆಗೆ ಸುಮಾರು 2.8 ಕಿ.ಮೀ. ಅಷ್ಟು ಬ್ಯಾರಿಕೇಡ್ ನಿರ್ಮಿಸಲಾಗಿದೆ. ಜಂಗಲಾಡಿ ಹಾಡಿಗೆ ತೆರಳಲು ರಸ್ತೆಯಲ್ಲಿ ಬ್ಯಾರಿಕೇಡ್ ದ್ವಾರ ನಿರ್ಮಿಸಲಾಗಿದೆ. ಆದರೆ ದ್ವಾರವನ್ನು ತೆರೆದು ಮುಚ್ಚುವ ಕೆಲಸ ಸರಿಯಾಗಿ ಆಗುತ್ತಿಲ್ಲ. ದ್ವಾರದ ನಿರ್ವಹಣೆಯನ್ನು ಸ್ಥಳೀಯರಿಗೆ ನೀಡಿರುವದು ಸಮಸ್ಯೆಗೆ ಕಾರಣವಾಗಿದೆ. ದ್ವಾರವನ್ನು ಮುಚ್ಚುವ ಕಾರ್ಯದಲ್ಲಿ ಲೋಪವಾಗುತ್ತಿರುವ ಕಾರಣ ದ್ವಾರ ಮೂಲಕ ಆನೆ ನೇರವಾಗಿ ಗ್ರಾಮಕ್ಕೆ ನುಸುಳಲು ಸಾಧ್ಯವಾಗುತ್ತಿದೆ.

ಪ್ರತಿನಿತ್ಯ ದ್ವಾರವನ್ನು ಮುಚ್ಚುವದರಿಂದ ಸಮಸ್ಯೆ ಒಂದಷ್ಟು ಪರಿಹಾರ ಕಾಣಲಿದೆ. ತುರ್ತು ಯೋಜನೆ ಮೂಲಕ ಗ್ರಾಮದಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟಿ ಗೇಟ್ ಮುಚ್ಚ ಬೇಕು. ದ್ವಾರದ ನಿರ್ವಹಣೆಯನ್ನು ವನ್ಯಜೀವಿ ಇಲಾಖೆ ವಹಿಸಿಕೊಳ್ಳಬೇಕು ಎಂಬದು ಗ್ರಾಮಸ್ಥರ ಒತ್ತಾಯವಾಗಿದೆ.

-ಸುದ್ದಿಪುತ್ರ