ಶ್ರೀಮಂಗಲ, ಆ. 31: ರೈತರೋರ್ವರು ಬ್ಯಾಂಕಿನಲ್ಲಿ ಇರಿಸಿದ್ದ ನಿರಖು ಠೇವಣಿ (ಎಫ್.ಡಿ) ಹಣವನ್ನು ವಿಕಸನಗೊಂಡರೂ ಅದನ್ನು ಮರುಪಾವತಿಸಲು ನಿರಾಕರಿಸಿರುವ ಬ್ಯಾಂಕಿನ ಕ್ರಮವನ್ನು ಕೊಡಗು ಬೆಳೆಗಾರರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ನಿರಖು ಠೇವಣಿ ಹಣವನ್ನು ಸಂಪೂರ್ಣವಾಗಿ ಮರುಪಾವತಿಸದಿದ್ದರೆ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಕೊಡಗು ಬೆಳೆಗಾರರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜಂಟಿಯಾಗಿ ಶ್ರೀಮಂಗಲದಲ್ಲಿ ಸಭೆ ನಡೆಸಿದ್ದು, ಪೆÇನ್ನಂಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ರೈತರೋರ್ವರು ನಿರಖು ಠೇವಣಿ ವಿಕಸನಗೊಂಡು ಸುಮಾರು ರೂ. 6.70 ಲಕ್ಷ ಆಗಿದ್ದು, ಅದನ್ನು ಮರುಪಾವತಿಸಲು ರೈತ ಹೇಳಿದಾಗ ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದಾರೆ. ನಿಮ್ಮ ಠೇವಣಿ ಮುಕ್ತಾಯವಾಗಿದೆ ಎಂದು ಬಾಂಡ್ ಮೇಲೆ ಬರೆದು ಕಳುಹಿಸಲಾಗಿದೆ. ಇದು ಬ್ಯಾಂಕ್‍ನ ಮೇಲೆ ನಂಬಿಕೆ ಇಟ್ಟು ತಮ್ಮ ಕಷ್ಟ ಕಾಲದಲ್ಲಿ, ವಯೋಮಾನದಲ್ಲಿ ಮತ್ತು ತಮ್ಮ ಕುಟುಂಬದ ಭದ್ರತೆಗಾಗಿ ಇರಿಸಿದ್ದ ಠೇವಣಿಯನ್ನು ದುರ್ಬಳಕೆ ಮಾಡಿಕೊಂಡಿರುವ ಕ್ರಮ ಆಘಾತಕಾರಿಯಾಗಿದೆ ಎಂದು ಉಭಯ ಸಂಘಟನೆಯ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಠೇವಣಿ ಇರಿಸಿರುವ ರೈತ ಬ್ಯಾಂಕಿನಲ್ಲಿ ಸಾಲ ಹೊಂದಿಕೊಂಡಿದ್ದು, ಇದರ ಪಾವತಿಗೆ ಸಹ ನಿಯಮಾನುಸಾರ ನಿರಖು ಠೇವಣಿಯ ಹಣವನ್ನು ಹೊಂದಾಣಿಕೆ ಮಾಡುವಂತಿಲ್ಲ. ಒಂದುವೇಳೆ ಈ ರೀತಿಯ ದುರುಪಯೋಗ ಬ್ಯಾಂಕ್‍ಗಳು ಮಾಡಿದರೆ ಬ್ಯಾಂಕಿನ ಮೇಲೆ ಗ್ರಾಹಕರು ವಿಶ್ವಾಸ ಕಳೆದುಕೊಳ್ಳಲಿದ್ದಾರೆ. ನಿರಖು ಠೇವಣಿಯನ್ನು ಅದರ ವಿಕಸನ ನಂತರ ಫಲಾನುಭವಿಯ ಇಚ್ಚೆಯಂತೆ ಮರುಪಾವತಿಸಿಕೊಳ್ಳಲು ಹೇಳಿದಾಗ ಅದನ್ನು ನಿರಾಕರಿಸುವದು ಆ ಬ್ಯಾಂಕ್ ತನ್ನ ಗ್ರಾಹಕನಿಗೆ ಮಾಡುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸಂಬಂಧಿಸಿದ ರೈತ ಕೊಡಗು ಬೆಳೆಗಾರರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಗೆ ದೂರು ನೀಡಿದ್ದು, ಪೆÇನ್ನಂಪೇಟೆ ಎಸ್.ಬಿ.ಐ. ಶಾಖೆಯ ವ್ಯವಸ್ಥಾಪಕ ಸಿಯಾಸ್ ಅವರಿಗೆ ಉಭಯ ಸಂಘಟನೆಗಳ ಪ್ರಮುಖರು ಭೇಟಿಯಾಗಿ ಮನವಿ ನೀಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಈ ಬಗ್ಗೆ ಬ್ಯಾಂಕ್ ತ್ವರಿತವಾಗಿ ಹಣವನ್ನು ಮರುಪಾವತಿಸುವಂತೆ ಕೇಳಲಾಗಿದೆ. ಈ ಬಗ್ಗೆ ಹಿಂದಿನ ವ್ಯವಸ್ಥಾಪಕರು ಕ್ರಮ ಕೈಗೊಂಡಿದ್ದು, ತಾವು ಅಧಿಕಾರ ವಹಿಸಿಕೊಂಡು ಒಂದು ತಿಂಗಳಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಹರೀಶ್‍ಮಾದಪ್ಪ, ಜಂಟಿ ಕಾರ್ಯದರ್ಶಿ ದಾದಾ ದೇವಯ್ಯ, ಖಜಾಂಚಿ ವಿಜಯ್ ನಂಜಪ್ಪ, ತಾಂತ್ರಿಕ ಸಲಹೆಗಾರ ಶರಿಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಮೋಹನ್ ಮಾದಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿಮಂದಯ್ಯ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತಮ್ಮುಮುತ್ತಣ್ಣ ಭಾಗವಹಿಸಿದ್ದರು.