ಮಡಿಕೇರಿ, ಆ. 31: ಕಳೆದತಾ. 3 ರಿಂದ 16ರ ತನಕ ಆವಾಂತರ ಸೃಷ್ಟಿಸಿದ್ದ ಆಶ್ಲೇಷಾ ಮಳೆಯ ಬೆನ್ನಲ್ಲೆ; ಮಖಾ ಮಳೆಯ ವಿಪರೀತ ಚಳಿ ಹಾಗೂ ಮೋಡಗಳ ನಡುವೆ ಸಮಸ್ಯೆ ಉಂಟು ಮಾಡಿದ್ದರೆ, ಇಂದಿನಿಂದ ಆರಂಭಗೊಂಡಿರುವ ಹುಬ್ಬಾ ಮಳೆ ಅದೇ ರೀತಿ ಮುಂದುವರಿಯುವ ಲಕ್ಷಣ ಗೋಚರಿಸಿದೆ.

ಇಂದು ಬೆಳಗ್ಗಿನ ಜಾವದಿಂದ ರಭಸಗೊಂಡಿದ್ದ ಹುಬ್ಬಾ ಅಲ್ಲಲ್ಲಿ ಸುರಿಯುವದರೊಂದಿಗೆ ಜನತೆಯಲ್ಲಿ ಮತ್ತೆ ಆತಂಕ ಮೂಡಿದೆ. ಕಳೆದ 24 ಗಂಟೆಗಳಲ್ಲಿ ತಲಕಾವೇರಿ, ಸಂಪಾಜೆ ಹಾಗೂ ಗಾಳಿಬೀಡು ಸುತ್ತಮುತ್ತ ಸರಾಸರಿ 1.38 ಇಂಚು ಮಳೆಯಾಗಿದೆ. ಭಾಗಮಂಡಲ, ನಾಪೋಕ್ಲು ವ್ಯಾಪ್ತಿಯಲ್ಲಿ 0.82 ಇಂಚು ದಾಖಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ 0.73 ಇಂಚು ಮಳೆ ದಾಖಲಾಗಿದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ವ್ಯಾಪ್ತಿಯಲ್ಲಿ 0.22 ಇಂಚು ಹಾಗೂ ದಕ್ಷಿಣ ಕೊಡಗಿನ ಬಿರುನಾಣಿ ಸುತ್ತಮುತ್ತ 0.21 ಇಂಚು ಸರಾಸರಿ ಮಳೆಯಾಗಿದೆ. ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿನ ಸರಾಸರಿಒ 85.48 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 148.65 ಇಂಚು ದಾಖಲಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ಒಟ್ಟು 113.75 ಇಂಚು ಹಾಗೂ ಕಳೆದ ವರ್ಷದಲ್ಲಿ 215.20 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಅವಧಿಗೆ 57.94 ಇಂಚು ಹಾಗೂ ಕಳೆದ ವರ್ಷ 118.26 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಈ ಅವಧಿಗೆ 87.03 ಇಂಚು ಹಾಗೂ ಕಳೆದ ವರ್ಷ ಈ ವೇಳೆಗೆ 112.48 ಇಂಚು ಮಳೆ ದಾಖಲಾಗಿತ್ತು.