ಮಡಿಕೇರಿ, ಆ.31: ಕಳೆದ 35 ವರ್ಷಗಳಿಂದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ನಬಾರ್ಡ್) ವಿವಿಧ ಹಂತದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಮುಂಡಂಡ ಸಿ.ನಾಣಯ್ಯ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ಕಾರ್ಪೋರೇಷನ್ ಬ್ಯಾಂಕಿನ ಮೈಸೂರು ವಲಯದ ಸಿ.ವಿ. ಮಂಜುನಾಥ್ ಇತರರು ನಾಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ನಬಾರ್ಡ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸೇತುವೆ, ರಸ್ತೆ ಹೀಗೆ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಾಣಯ್ಯ ಅವರು ಕೈಗೊಂಡಿದ್ದಾರೆ ಎಂದರು.

ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ‘ಬ್ಯಾಂಕುಗಳು ಮತ್ತು ಸಾರ್ವಜನಿಕರ ನಡುವೆ ನಾಣಯ್ಯ ಅವರು ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ ನಬಾರ್ಡ್ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲಪಿಸುವ ನಿಟ್ಟಿನಲ್ಲಿ ನಾಣಯ್ಯ ಕಾಳಜಿ ಮತ್ತು ಉತ್ಸುಕತೆ ಮೆಚ್ಚಬೇಕಿದೆ ಎಂದರು. ಮುಂಡಂಡ ಸಿ.ನಾಣಯ್ಯ ಅವರ ಸಲಹೆ, ಮಾರ್ಗದರ್ಶನ ನಿರಂತರವಾಗಿರಲಿ ಎಂದರು.

ಖಾದಿ ಮತ್ತು ಗಾಮೋದ್ಯೋಗ ಮಂಡಳಿಯ ವ್ಯವಸ್ಥಾಪಕರಾದ ಶಾಂತಿ ಮಹಾತ್ಮ ಗಾಂಧೀಜಿಯವರ ಕಂಚಿನ ಪುತ್ಥಳಿ ಹಾಗೂ ಶಾಲು ನೀಡಿ ಮುಂಡಂಡ ಸಿ.ನಾಣಯ್ಯ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಂಡಂಡ ಸಿ.ನಾಣಯ್ಯ ಅವರು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಂಗಳೂರು ಸಂಸ್ಥೆಯಲ್ಲಿ ಹಲವರಿಗೆ ತರಬೇತಿ ನೀಡಿ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಪ್ರಯತ್ನಿಸಲಾಗಿದೆ ಎಂದು ಸ್ಮರಿಸಿದರು.