ಗೋಣಿಕೊಪ್ಪಲು, ಆ. 31: ದ.ಕೊಡಗಿನ ಗೋಣಿಕೊಪ್ಪ ನಗರದ ಐದು ಕಿ.ಮೀ. ದೂರದ ಹಾತೂರು ಬಳಿಯ ಕುಂದ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಬೈಕ್ ಅವಘಡ ಸಂಭವಿಸಿದ್ದು, ಬೈಕ್ ಸವಾರ ಖಾಸಗಿ ಬಸ್ ಮಾಲೀಕ ಮಲಯಾಳಿ ಕೆ.ಕೆ.ಸತೀಶ್ (45) ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ಸತೀಶ್‍ನ ಮನೆಯವರು ಇದೊಂದು ಪೂರ್ವಯೋಜಿತ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರಿಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಪ್ರಕಾಶ್, ಗೋಣಿಕೊಪ್ಪ ಠಾಣಾಧಿಕಾರಿ ಮಂಚಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ 23 ವರ್ಷಗಳಿಂದ ವೃತ್ತಿಯಲ್ಲಿ ಚಾಲಕನಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಸತೀಶ್ ಸಾರ್ವಜನಿಕ ವಲಯದಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಜೀವನದಲ್ಲಿ ಕಷ್ಟಪಟ್ಟು ಮುಂದೆ ಬಂದಿದ್ದ ಸತೀಶ್ ಇತ್ತೀಚೆಗೆ ಮಂಜುನಾಥ ಎಂಬ ಹೆಸರಿನ ಖಾಸಗಿ ಬಸ್ ಅನ್ನು ಬೋಗ್ಯಕ್ಕೆ ಪಡೆದು ಆರ್ಥಿಕ ಸುಧಾರಣೆಯಾಗಿದ್ದರು. ತನ್ನ ಸ್ವಂತ ಜೀಪಿನಲ್ಲಿ ಪ್ರತಿ ದಿನ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಇವರು ನಿನ್ನೆಯಷ್ಟೇ ತನ್ನ ಮಕ್ಕಳಾದ ಅಜಿತ್ ಹಾಗೂ

(ಮೊದಲ ಪುಟದಿಂದ) ಅನಿಲ್‍ಗೆ ಹೊಸದಾದ ಸ್ಕೂಟರ್‍ಅನ್ನು ತೆಗೆದುಕೊಟ್ಟಿದ್ದರು. ಸಂಜೆ ನಾಲ್ಕರ ಸುಮಾರಿಗೆ ಗೋಣಿಕೊಪ್ಪ ಸಮೀಪದ ಪಾಲಿಬೆಟ್ಟ ರಸ್ತೆಯಲ್ಲಿರುವ ದೇವಸ್ಥಾನವೊಂದಕ್ಕೆ ತೆರಳಿದ ಸತೀಶ್ ತಾನು ಖರೀದಿಸಿದ ಹೊಸ ಸ್ಕೂಟರ್‍ಗೆ ಪೂಜೆ ಸಲ್ಲಿಸಿ ಅದನ್ನು ಮಕ್ಕಳಿಗೆ ಕೊಟ್ಟು ಮನೆಗೆ ತೆರಳುವಂತೆ ಹೇಳಿದ್ದರು.

ಸ್ವಲ್ಪ ಸಮಯದ ನಂತರ ತಾನು ಮನೆಗೆ ಬರುವದಾಗಿ ತಿಳಿಸಿದ ಸತೀಶ್ ರಾತ್ರಿ ಹತ್ತು ಗಂಟೆಯಾದರೂ ಮನೆಗೆ ಬಾರದಿರುವದನ್ನು ಮನಗಂಡ ಮನೆಯವರು ಸತೀಶ್‍ಗೆ ಫೋನ್ ಮಾಡಿದರಾದರೂ ಫೋನ್ ರಿಂಗಾಗುತ್ತಿತ್ತೇ ವಿನಹ ಸ್ವೀಕರಿಸುತ್ತಿರಲಿಲ್ಲ. ಪದೆ ಪದೆ ಫೋನ್ ಮಾಡಿದರೂ ಕರೆ ಸ್ವೀಕರಿಸದ ಕಾರಣ ಮಕ್ಕಳಾದ ಅಜಿತ್ ಹಾಗೂ ಅನಿಲ್ ತಂದೆಯವರು ಮನೆಯಲ್ಲಿ ನಿಲ್ಲಿಸಿದ್ದ ಜೀಪನ್ನು ಚಾಲನೆ ಮಾಡಿಕೊಂಡು ಕುಂದ ಮಾರ್ಗವಾಗಿ ಗೋಣಿಕೊಪ್ಪ ಕಡೆಗೆ ಬರುತ್ತಿದ್ದ ಸಂದರ್ಭ ಕುಂದಾ-ಹಾತೂರು ರಸ್ತೆಯ ಬದಿಯಲ್ಲಿ ಪಲ್ಸರ್ ಬೈಕ್‍ನೊಂದಿಗೆ (ಕೆ.ಎ.46 ಇ.6773) ತಂದೆ ಬಿದ್ದಿರುವದನ್ನು ಕಂಡಿದ್ದಾರೆ. ಕೂಡಲೇ ಜೀಪಿನಲ್ಲಿ ಗೋಣಿಕೊಪ್ಪ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮೃತಪಟ್ಟು ಕೆಲವು ಗಂಟೆಗಳು ಕಳೆದಿವೆ ಎಂದು ವೈದ್ಯರು ಮಾಹಿತಿ ನೀಡಿದ ನಂತರ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮುಂಜಾನೆಯಿಂದ ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದಂತೆ ಸಂಘ ಸಂಸ್ಥೆಯ ಪ್ರಮುಖರು ಜಮಾವಣೆಗೊಂಡು ಅಂತಿಮ ದರ್ಶನ ಪಡೆದರು. ಬಸ್ ಮಾಲೀಕರ, ಚಾಲಕರ ಸಂಘದ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿ ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿದರು.ಘಟನಾ ಸ್ಥಳಕ್ಕೆ ಮಾಧ್ಯಮದವರನ್ನು ಕರೆದೊಯ್ದು ಈ ಬಗ್ಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು. ಮೃತ ವ್ಯಕ್ತಿ ಸತೀಶ್ ತನ್ನ ಎರಡು ಗಂಡು ಮಕ್ಕಳು, ಪತ್ನಿ ಶೋಭಾ, ತಂದೆ ಕೃಷ್ಣ ಹಾಗೂ ತಾಯಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹಾತೂರು ಬಳಿಯ ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು.

-ಹೆಚ್.ಕೆ. ಜಗದೀಶ್.