ಗೋಣಿಕೊಪ್ಪ ವರದಿ, ಆ. 31: ಪುತ್ತೂರು ಮಹಿಳಾ ವಿವಿಧೋದ್ಧೇಶ ಸಹಕಾರಿ ಸಂಘದ ವತಿಯಿಂದ ಕೊಡಗು ಜಿಲ್ಲೆಯಲ್ಲಿನ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಆರ್ಥಿಕ ಸಹಾಯ ನೀಡಲಾಯಿತು.

ಗೋಣಿಕೊಪ್ಪ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಸುಮಾರು 5 ಜನ ಸಂತ್ರಸ್ತರು ಹಾಗೂ 4 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಧನ ನೀಡಲಾಯಿತು. ಸಂತ್ರಸ್ತ ಕೆ.ಎ. ಸುಬ್ಬಯ್ಯ ಅವರಿಗೆ ನಮಸ್ಕರಿಸುವ ಮೂಲಕ ಸಂಘದ ಪದಾಧಿಕಾರಿಗಳು ವಿಶೇಷತೆ ಮೂಡಿಸಿದರು.

ನಾಲ್ವರು ವಿದ್ಯಾರ್ಥಿಗಳೊಂದಿಗೆ ಸಂತ್ರಸ್ತರಾದ ಕೆ.ಎ. ಸುಬ್ಬಯ್ಯ, ಜೆ.ಕೆ. ದಾಸಪ್ಪ, ವಿ.ಎಲ್. ಶೈಲಾ, ಸಿ.ಎನ್. ವಿಜಯ, ಎಂ.ಎಂ. ನಸೀರಾ ನೆರವು ಸ್ವೀಕರಿಸಿದರು.

ಪುತ್ತೂರು ಮಹಿಳಾ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷೆ ಎಚ್. ಗೌರಿ ಮಾತನಾಡಿ, ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಡೆವಿಡೆಂಟ್ ಪಾಲಿನ ಶೇ. 1 ಭಾಗವನ್ನು ನೀಡಲು ಸದಸ್ಯರು ನೀಡಿದ ಸಲಹೆಯಂತೆ ರೂ. 86 ಸಾವಿರ ಹಣವನ್ನು ನೀಡಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷೆ ಉಮಾ ಡಿ. ಪ್ರಸನ್ನ, ನಿರ್ದೇಶಕರಾದ ಟಿ. ಪ್ರೇಮಲತಾರಾವ್, ಮೋಹಿನಿ ಪಿ. ನಾಯ್ಕ, ಪ್ರಭಾರ ಸಿಇಒ ರಮೇಶ್ ನಾಯಕ್, ಆರ್ಥಿಕ ಸಲಹೆಗಾರ ಲಕ್ಷ್ಮಿನಾರಾಯಣ ಕಡಂಬಳಿತ್ತಾಯ ಉಪಸ್ಥಿತರಿದ್ದರು.