ಕೂಡಿಗೆ, ಆ. 31: ಕೂಡಿಗೆಯಲ್ಲಿ ಕಾವೇರಿ-ಹಾರಂಗಿ ನದಿ ಸಂಗಮದ ಸ್ಥಳಕ್ಕೆ ತೆರಳುವ ದಾರಿಯ ಸರ್ವೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೂಡಿಗೆ ಗ್ರಾಮದ ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯಿಂದ ಸಂಗಮದವರೆಗೆ ಹೋಗುವ ದಾರಿ ಒತ್ತುವರಿಯಾಗಿದೆ. ಅಲ್ಲದೆ ಸಂಗಮಕ್ಕೆ ಹೋಗಲು ದಾರಿ ಇಲ್ಲದಾಗಿದೆ. ಈ ವಿಷಯದ ಬಗ್ಗೆ ಗ್ರಾಮ ಸಭೆಯಲ್ಲಿ ಅನೇಕ ಬಾರಿ ಚರ್ಚೆ ನಡೆದಿತ್ತು.

ಪಂಚಾಯಿತಿ ಮಾಸಿಕ ಸಭೆಯಲ್ಲಿನ ತೀರ್ಮಾನವನ್ನು ತಾಲೂಕು ಪಂಚಾಯಿತಿ ಮಟ್ಟಕ್ಕೆ ಕಳುಹಿಸಲಾಗಿದೆ. ಅಲ್ಲದೆ ಸಂಗಮ ದಾರಿಯ ಸರ್ವೆ ಕಾರ್ಯ ಮುಗಿದಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಹಣ ನೀಡುವದಾಗಿ ಸುನಿಲ್ ಸುಬ್ರಮಣಿ ಅವರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭ ಹೇಳಿದ್ದರು. ಅದರಿಂದ ಸಂಬಂಧಿಸಿದ ಇಲಾಖೆಯವರು ಸರ್ವೆ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.