ಶ್ರೀಮಂಗಲ, ಆ. 31: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮಗಳಲ್ಲಿ ಈ ವರ್ಷ ಭಾರೀ ಮಳೆ ಗಾಳಿಯಾಗಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದ ಗದ್ದೆ, ಕಾಫಿ ತೋಟ ಮತ್ತು ಮನೆಗಳಿಗೂ ಹಾನಿಯಾಗಿದೆ. ಹಲವು ಮನೆಗಳು ಭೂಕುಸಿತದಿಂದ ಅಪಾಯದಂಚಿನಲ್ಲಿದ್ದು, ಮುಂದಿನ ಮಳೆಗಾಲದಲ್ಲಿ ವಾಸಿಸಲು ಆತಂಕ ಪಡುವಂತಾಗಿದೆ. ಈ ಹಿಂದೆ ಹೆಚ್ಚಿನ ಮಳೆಯಾಗಿದ್ದರೂ ಇಷ್ಟೊಂದು ಭೂಕುಸಿತವಾಗಿರಲಿಲ್ಲ. ಜುಲೈ ತಿಂಗಳಿನಲ್ಲಿ ಗುಡುಗಿನ ಶಬ್ದ ಕೇಳಿ ಭೂಮಿ - ಮನೆಗಳು ಕಂಪನವಾಗಿರುವ ಅನುಭವವಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ಭೂವಿಜ್ಞಾನಿಗಳಿಂದ ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶದ ಬಗ್ಗೆ ಮಾಹಿತಿ ನೀಡಬೇಕಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ಕೆ. ನಾಣಯ್ಯ ಒತ್ತಾಯಿಸಿದ್ದಾರೆ.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೆÇರಾಡು, ಬಾಡಗರಕೇರಿ, ತೆರಾಲು, ಬಿರುನಾಣಿ ಮತ್ತು ಪರಕಟಗೇರಿ ಗ್ರಾಮಗಳಲ್ಲಿ ಭೂಕುಸಿತದಿಂದ ಮನೆ, ಕಾಫಿ ತೋಟ, ಭತ್ತದ ಗದ್ದೆಗಳಿಗೆ ಹಾನಿಯಾಗಿದೆ. ಈ ತೋಟ-ಗದ್ದೆಯ ಆದಾಯವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದ್ದು, ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ಕಾಫಿ ತೋಟ ಹಾಗೂ ಭತ್ತದ ಗದ್ದೆ ಹೊಂದಿದ್ದರೂ ಆದಾಯ ಇಲ್ಲದಂತಾಗಿದೆ. ತೋಟ ಹಾಗೂ ಗದ್ದೆ ಇರುವ ದಾಖಲಾತಿ ಆಧಾರದಲ್ಲಿ ಜನರಿಗೆ ಸೌಲಭ್ಯ ನೀಡುವದನ್ನು ಕಡಿತಗೊಳಿಸದೇ ಈ ವ್ಯಾಪ್ತಿಯ ಜನರ ಆದಾಯವನ್ನು ಪರಿಗಣಿಸಿ ಸರ್ಕಾರ ಸೂಕ್ತ ಸೌಲಭ್ಯ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಬಿ.ಪಿ.ಎಲ್. ಪಟ್ಟಿಗೆ ಈ ವ್ಯಾಪ್ತಿಯ ಸಣ್ಣ ರೈತರನ್ನು ಸೇರಿಸಬೇಕೆಂದು ಒತ್ತಾಯಿಸಿದರು.