ಮಡಿಕೇರಿ, ಆ. 31: ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣದಿಂದಾಗಿ ಪರಿಸರ ಹಾಳಾಗುತ್ತಿದೆ. ಜಲಮೂಲಗಳು ಕಲುಷಿತಗೊಳ್ಳುತ್ತಿದೆ. ಸ್ವಚ್ಛ ಪರಿಸರ ಹಾಗೂ ಜಲ ಮೂಲಗಳು ಉಳಿಯಬೇಕಾದರೆ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುವದು ಅನಿವಾರ್ಯ ಎಂದು ಪತ್ರಕರ್ತ ಹಾಗೂ ಕೊಡಗು ಪ್ರೆಸ್‍ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು ಹೇಳಿದ್ದಾರೆ.

ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್‍ನಿಂದ ನಡೆದ ಪರಿಸರ ಸ್ನೇಹಿ ಗಣೇಶ ಹಬ್ಬ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟ ಗಣೇಶ ಮೂರ್ತಿಯನ್ನು ನದಿ, ಹೊಳೆಯಲ್ಲಿ ವಿಸರ್ಜನೆ ಮಾಡಬಾರದರು. ಗಣೇಶನ ಮೂರ್ತಿ ಆಕರ್ಷಣೆಯಾಗಿರಲೆಂದು ವಿವಿಧ ಬಣ್ಣಗಳನ್ನು ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಇದರಿಂದ ವಿಷಕಾರಿ ಅಂಶಗಳು ಜಲಮೂಲಕ್ಕೆ ಸೇರುತ್ತದೆ. ಈ ನೀರನ್ನು ನಾವು ಕುಡಿದರೆ ರೋಗ ಹರಡುವದು ಖಚಿತವಾಗಿದೆ. ಆದ್ದರಿಂದ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಪ್ರಾಕೃತಿಕ ಬಣ್ಣ ಬಳಸಿ ಅದನ್ನು ವಿಸರ್ಜನೆ ಮಾಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಕಿ ರೇವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲೆಯ ಶಿಕ್ಷಕರಾದ ವತ್ಸಲ, ಜಾನಕಿ, ಇಕೋ ಕ್ಲಬ್ ಸಂಚಾಲಕರು ತೇಜಸ್ವಿನಿ, ಇಂದ್ರಾಣಿ, ಕಾವ್ಯ, ನಿತ್ಯ ಮತ್ತಿತರರು ಹಾಜರಿದ್ದರು. ವಿದ್ಯಾರ್ಥಿಗಳು ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಮಾಡಿದ್ದರು. ಶಾಲೆಯ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಕಲ್ಪನೆಯಿಂದ ಮಾಡಿದ್ದ ಬಗೆ ಬಗೆಯ ಗಣಪತಿ ಮೂರ್ತಿಗಳು ಗಮನ ಸೆಳೆದವು. ಯಾವದೇ ರಾಸಾಯನಿಕ ಬಣ್ಣ ಬಳಸದೆ ಪ್ರಾಕೃತಿಕ ದತ್ತವಾದ ಬಣ್ಣವನ್ನು ಹಚ್ಚಿ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಎಂಬ ಸಂದೇಶ ಸಾರಿದರು.