ವೀರಾಜಪೇಟೆ, ಆ. 31: ಪ್ರತಿಭಾವಂತ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಬಳಸಿಕೊಂಡು ಧೈರ್ಯದಿಂದ ತಮ್ಮಲ್ಲಿರುವ ಪ್ರತಿಭೆಯನ್ನು ತೋರಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅಭಿಪ್ರಾಯಪಟ್ಟರು.

ವೀರಾಜಪೇಟೆ ಬಳಿಯ ಕಲ್ಲುಬಾಣೆ ಬದ್ರಿಯಾ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಲ್ತೋಡು ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮಹೇಶ್ ಗಣಪತಿ ಮಾತನಾಡಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತಿರುವ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇದಿಕೆಯನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ತೋರಲು ಮುಂದಾಗಬೇಕು ಎಂದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮಲ್ಲಿರುವ ಪ್ರತಿಭೆಗಳನ್ನು ತೋರಲು ವೇದಿಕೆಗಳು ಅಗತ್ಯವಿರುವದರಿಂದ ವಿದ್ಯಾರ್ಥಿಗಳು ಪ್ರತಿಭಾಕಾರಂಜಿ ವೇದಿಕೆಯನ್ನು ಉಪಯೋಗಿಸಿಕೊಂಡು ದೈರ್ಯದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ರಾಜ್ಯ ಮಟ್ಟದಲ್ಲಿಯೂ ಭಾಗವಹಿಸುವಂತಾಗಬೇಕು ಎಂದರಲ್ಲದೆ ವೇದಿಕೆಯಲ್ಲಿ ನಾಟಕದ ತುಣುಕು ಪ್ರದÀರ್ಶಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪಿ.ಕೆ. ಅಫ್ಸಲ್ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕರ ಸಂಘದ ಸೀತಾ, ಶಿಕ್ಷಣ ಇಲಾಖೆಯ ಬಿ.ಐ.ಇ.ಆರ್.ಟಿ ಅಜಿತಾ, ಬಿ.ಆರ್.ಪಿ. ಗೀತಾಂಜಲಿ, ಯಲ್ಲಪ್ಪ ಪೂಜಾರಿ, ಸಿ.ಆರ್.ಪಿ. ಜೀವನ್, ಶ್ರೀನಿವಾಸ್, ನಿಂಗರಾಜು, ಬಿ.ಜಿ. ಸಾಯಿನಾಥ್ ಮುಂತಾದವರು ಉಪಸ್ಥಿತರಿದ್ದಸರು. ಶಿಕ್ಷಕರಾದ ಟಿ.ಜಿ. ಕಲ್ಪ ಸ್ವಾಗತಿಸಿದರು, ಹೆಚ್.ಎಂ. ರಂಜಿತ್ ಮತ್ತು ರುಬೈದ ನಿರೂಪಿಸಿದರೆ, ಶಿಕ್ಷಕಿ ತಾರಬಾಯಿ ವಂದಿಸಿದರು.