ಮಡಿಕೇರಿ, ಆ. 30: ಚೆಟ್ಟಳ್ಳಿಯ ಶ್ರೀಮಂಗಲ ಕಂಪೆನಿ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಗೌಡ ಜನಾಂಗದ ಕುಟುಂಬಗಳಿಗಾಗಿ ಸಿಎಸ್‍ಪಿಆರ್ ಸ್ಮಾರಕ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಅಕ್ಟೋಬರ್ 12 ಮತ್ತು 13 ರಂದು ಮಡಿಕೇರಿಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಮಂಗಲ ಕಂಪೆನಿ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ವಕ್ತಾರ ದಂಬೆಕೋಡಿ ಎಸ್. ಹರೀಶ್ ಅವರು, ಗೌಡ ಜನಾಂಗದ ಹತ್ತು ಕುಟುಂಬ 18 ಗೋತ್ರದವರಿಗಾಗಿ ಕುಟುಂಬವಾರು ಪಂದ್ಯಾವಳಿಯನ್ನು 3ನೇ ಬಾರಿಗೆ ಮಡಿಕೇರಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಪಂದ್ಯಾವಳಿಯು 12 ವರ್ಷದ ಒಳಗಿನವರಿಗೆ, 13 ರಿಂದ 25 ವರ್ಷ ಹಾಗೂ 26 ವರ್ಷ ಮೇಲ್ಪಟ್ಟವರಿಗೆ ಒಟ್ಟು 13 ವಿಭಾಗಗಳಲ್ಲಿ ನಡೆಯಲಿದೆ. ಇದರಲ್ಲಿ ಮಿಕ್ಸ್‍ಡ್ ಡಬಲ್ಸ್‍ಗೆ ವಯಸ್ಸಿನ ಮಿತಿ ಇರುವದಿಲ್ಲ ಎಂದರಲ್ಲದೆ, ಕುಟುಂಬಸ್ಥರ ಸಂಖ್ಯೆ ಕಡಿಮೆ ಇರುವವರು ಈ ಮೇಲಿನ ಯಾವದೇ ವಿಭಾಗಗಳಲ್ಲಿ ಭಾಗವಹಿಸಬಹುದು ಎಂದು ನುಡಿದರು.

ಈ ಬಾರಿಯ ಶಟಲ್ ಪಂದ್ಯಾವಳಿಯ ಟ್ರೋಫಿ ಹಾಗೂ ನಗದು ಬಹುಮಾನವನ್ನು ಕೆದಂಬಾಡಿ ಹಾಗೂ ಪೇರಿಯನ ಕುಟುಂಬದವರು ಅವರ ಹಿರಿಯರ ಜ್ಞಾಪಕಾರ್ಥವಾಗಿ ಪ್ರಾಯೋಜಿಸಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವವರು ಸೆ. 21 ರೊಳಗಾಗಿ ಮಡಿಕೇರಿಯ ಕೆಳಗಿನ ಗೌಡ ಸಮಾಜದ ವ್ಯವಸ್ಥಾಪಕ ಬೊಳ್ತಜಿ ಅಶೋಕ್ ಅವರನ್ನು (ಮೊ. 9448503524)ಸಂಪರ್ಕಿಸಿ ಮಾಹಿತಿ ಪಡೆದು ಹೆಸರು ನೋಂದಾಯಿಸಿ ಕೊಳ್ಳಬಹುದು. ಅಲ್ಲದೆ, ಹೆಚ್ಚಿನ ಮಾಹಿತಿಗೆ ಅಸೋಸಿಯೇಷನ್‍ನ ಪದಾಧಿಕಾರಿಗಳಾದ ಅಧ್ಯಕ್ಷ ಅಯ್ಯಂಡ್ರ ಆರ್ ಭೀಮಯ್ಯ (ಮೊ. 9449276379), ಉಪಾಧ್ಯಕ್ಷ ದಂಬೆಕೋಡಿ ಎಸ್. ಹರೀಶ್ (ಮೊ. 9448976364) ಅವರನ್ನು ಸಂಪರ್ಕಿಸಬಹುದು ಎಂದರು.

ಪಂದ್ಯಾವಳಿ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ನಡೆಯಲಿದ್ದು, ಪ್ರವೇಶಾತಿಗಳು ಹೆಚ್ಚಿದ್ದಲ್ಲಿ ಪಂದ್ಯಾವಳಿಯನ್ನು ಮತ್ತೊಂದು ದಿನಕ್ಕೆ ವಿಸ್ತರಿಸಲಾಗುವದು. ಪಂದ್ಯಾವಳಿಯ ಸಮಾರೋಪ ಸಮಾರಂಭ ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ರಾತ್ರಿ 7 ಗಂಟೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಅಯ್ಯಂಡ್ರ ಆರ್. ಭೀಮಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವ 1942 ರಲ್ಲಿ ಸಮಾನ ಮನಸ್ಕರಾದ ಕೆದಂಬಾಡಿ ಕೆ. ಚಿಣ್ಣಪ್ಪ, ದಂಬೆಕೋಡಿ ಬಿ. ಸುಬ್ರಾಯ, ಪೇರಿಯನ ಎಂ. ಪೂವಯ್ಯ, ಅಯ್ಯಂಡ್ರ ಕೆ. ರಾಮಪ್ಪ ಅವರುಗಳು ಒಗ್ಗೂಡಿ ಚೆಟ್ಟಳ್ಳಿಯಲ್ಲಿ ಸುಮಾರು 120 ಏಕರೆ ಜಾಗದಲ್ಲಿ ಕಾಫಿ ತೋಟವನ್ನು ಶ್ರೀಮಂಗಲ ಕಂಪೆನಿ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದ್ದು, ಅವರ ಅಂದಿನ ಪ್ರಯತ್ನದ ಫಲವಾಗಿ ಇಂದು ನೂರಾರು ಎಕರೆ ಕಾಫಿ ತೋಟವನ್ನು ಕಂಪೆನಿ ಹೊಂದುವಂತಾಗಿದೆ. ಇವರುಗಳಿಗೆ ಕಂಪೆನಿ ತೋಟ ಖರೀದಿಸಲು ಹಣದ ನೆರವು ನೀಡಿ ಸಹಕರಿಸಿದ ಅಯ್ಯಂಡ್ರ ಕೆ. ರಾಮಪ್ಪ ಅವರ ತಾಯಿ ಬೆಳ್ಯವ್ವ ಅವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ಪೇರಿಯನ ಪಿ. ಜಯಾನಂದ, ಮಾತನಾಡಿ, ಸ್ವತಃ ಕ್ರೀಡಾಪಟುಗಳಾಗಿದ್ದ ಇವರುಗಳು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದುದಲ್ಲದೆ, ಹಲವಾರು ಕ್ರೀಡಾಕೂಟಗಳನ್ನು ನಡೆಸಿದ್ದಾರೆ ಎಂದರು. ಅವರ ಸವಿ ನೆನಪಿಗಾಗಿ 2006 ಮತ್ತು 2013 ರಲ್ಲಿ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಸಿಎಸ್‍ಪಿಆರ್ (ಚಿನ್ನಪ್ಪ, ಸುಬ್ರಾಯ, ಪೂವಯ್ಯ, ರಾಮಪ್ಪ) ಸ್ಮರಣಾರ್ಥ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಸಲಾಗಿದ್ದು, ಇದೀಗ 3ನೇ ಬಾರಿಗೆ ಮಡಿಕೇರಿಯಲ್ಲಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆದಂಬಾಡಿ ಸಿ. ಪುರುಷೋತ್ತಮ, ಖಜಾಂಚಿ ಪೇರಿಯನ ಪಿ. ನವೀನ್ ಹಾಗೂ ಸಂಯೋಜಕ ದಂಬೆಕೋಡಿ ಎಸ್. ಪೂವಯ್ಯ ಉಪಸ್ಥಿತರಿದ್ದರು.