ಮಡಿಕೇರಿ, ಆ. 30: ಕಳೆದ ಕೆಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯ ಕಂಡುಬರುತ್ತಿದೆ. ಅದರಲ್ಲೂ ಕಳೆದ ವರ್ಷ ಹಾಗೂ ಈ ವರ್ಷ ಅತಿವೃಷ್ಟಿಯಿಂದಾಗಿ ಭಾರೀ ಅನಾಹುತಗಳು ಸಂಭವಿಸಿದ್ದು, ಕೃಷಿ ಪ್ರಧಾನ ಜಿಲ್ಲೆ ತತ್ತರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಿ ಜಿಲ್ಲೆಯ ಪುನಶ್ಚೇತನಕ್ಕೆ ಸಹಕರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಪ್ರಮುಖರು ಇತ್ತೀಚೆಗೆ ಭೇಟಿ ನೀಡಿದ್ದ ಕೇಂದ್ರ ಅಧ್ಯಯನ ತಂಡದ ಪ್ರಮುಖರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಕಂಡುಬಂದಿರುವ ಹಲವಾರು ಸಮಸ್ಯೆಗಳ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿದ್ದು, ಭೌಗೋಳಿಕವಾಗಿ ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯನ್ನು ಮತ್ತೆ ಸುಭದ್ರಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕೆಂದು ಕೋರಲಾಗಿದೆ.

ಕೇಂದ್ರ ತಂಡದ ಪ್ರಮುಖರನ್ನು ರೈತ ಸಂಘದ ಪ್ರಮುಖರಾದ ಚೆಟ್ರುಮಾಡ ಸುಜಯ್ ಮತ್ತಿತರರು ಭೇಟಿಯಾಗಿ ಈ ಬಗ್ಗೆ ಗಮನ ಸೆಳೆದರು.