ಗೋಣಿಕೊಪ್ಪ ವರದಿ, ಆ. 31 : ಇಲ್ಲಿನ ಗ್ರಾಮ ಮಟ್ಟದ ಕಸ ನಿರ್ವಹಣೆ ವಿಚಾರವಾಗಿ ಅಸ್ತಿತ್ವಕ್ಕೆ ಬಂದಿರುವ ಗೋಣಿಕೊಪ್ಪ ಅಭಿವೃದ್ಧಿ ಸಮಿತಿ ವತಿಯಿಂದ ಕಸ ನಿರ್ವಹಣೆ ವಿಚಾರವಾಗಿ ಆಯೋಜಿಸಿದ್ದ ಸಭೆಯಲ್ಲಿ ಪ್ರಮುಖ ನಾಲ್ಕು ನಿರ್ಣಯಗಳನ್ನು ತೆಗೆದುಕೊಂಡಿದ್ದು, ಗ್ರಾಮಸ್ಥರ ಸಹಕಾರದಲ್ಲಿ ಕಟ್ಟುನಿಟ್ಟಾಗಿ ಕಸ ವಿಂಗಡಣೆಗೆ ಕ್ರಮಕೈಗೊಳ್ಳಲು ಮುಂದಾಗುವಂತೆ ನಿರ್ಧರಿಸಲಾಯಿತು.

ಇಲ್ಲಿನ ಮರ್ಚೆಂಟ್ ಕೋ ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಗೋಣಿಕೊಪ್ಪ ಅಭಿವೃಧ್ಧಿ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆಯಲ್ಲಿ ಪ್ರಾಥಮಿಕ ಹಂತವಾಗಿ ಮನೆಗಳಿಂದ ಒಣಕಸವನ್ನು ಸಂಗ್ರಹಿಸುವ ಉದ್ದೇಶದಿಂದ ಗ್ರಾಮಸ್ಥರೇ ಒಣಕಸವನ್ನು ವಿಂಗಡಿಸಿ ನೀಡುವಂತೆ, ಈ ಬಗ್ಗೆ ಮನೆ, ಮನೆ ಜಾಗೃತಿ ಕಾರ್ಯಕ್ರಮ, ಸಮಿತಿ ಸದಸ್ಯರುಗಳು ಗಸ್ತು ತಿರುಗುವ ಮೂಲಕ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ಮೂಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕಸವನ್ನು ಸುಡುವ ತಂತ್ರಜ್ಞಾನದ ಅನುಷ್ಠಾನದ ಬಗ್ಗೆ ಪ್ರಮುಖರಿಂದ ಸಲಹೆ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ಅವಕಾಶವಿರು ವದರಿಂದ ಪಂಚಾಯಿತಿ ವ್ಯಾಪ್ತಿಯಲಿ ಜಾಗದ ಕೊರತೆ ಇರುವದರಿಂದ ಪ್ರಾಥಮಿಕ ಹಂತವಾಗಿ ಒಣಕಸವನ್ನು ಮಾತ್ರ ಸಂಗ್ರಹಿಸುವಂತೆ ಸಭೆ ನಿರ್ಧರಿಸಿತು. ಗ್ರಾಮ ಪಂಚಾಯಿತಿಯ ಸಿಬ್ಬಂದಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಮುಂದುವರಿಯುವಂತೆ ಪ್ರಮುಖರು ಸಲಹೆ ನೀಡಿದರು.

ಪಿಡಿಓ ಶ್ರೀನಿವಾಸ್ ಮಾತನಾಡಿ, ಆಡಳಿತ ಮಂಡಳಿ ನಿರ್ಧಾರದಂತೆ ಈಗಾಗಲೇ ಪಂಚಾಯಿತಿ ಹಳೇ ಕಟ್ಟಡದಲ್ಲಿ ಒಣಕಸ ವಿಂಗಡಣೆ ನಡೆಯುತ್ತಿದೆ. ಇದನ್ನು ಮುಂದುವರಿಸಲಾಗುತ್ತದೆ. ಹಸಿರುದಳ ಕಾರ್ಯಕರ್ತರು ಕಸವನ್ನು ಖರೀದಿ ಮಾಡಲಿದ್ದಾರೆ. ಹಸಿಕಸ ಸಂಗ್ರಹಿಸಲು ಆಗುತ್ತಿಲ್ಲ ಎಂದರು.

ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಅರ್ವತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹ ನಡೆಯುತ್ತಿಲ್ಲ. ಅಲ್ಲಿನ ನಿವಾಸಿಗಳು ಗೋಣಿಕೊಪ್ಪ ವ್ಯಾಪ್ತಿಗೆ ಕಸವನ್ನು ಸುರಿಯುತ್ತಿರುವದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕಾನೂನು ಮೂಲಕ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ನಿತಿ ಪೂಣಚ್ಚ ಮಾತನಾಡಿ, ಬೆಂಗಳೂರಿನ ಕೆಲವೊಂದು ಕಡೆಗಳಲ್ಲಿ ತ್ಯಾಜ್ಯ ಸುಡುವ ಘಟಕದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಲಯನ್ಸ್ ಕ್ಲಬ್ ವತಿಯಿಂದ ವೀಕ್ಷಣೆ ಮಾಡಲಾಗಿದೆ. ನೂತನ ತಂತ್ರಜ್ಞಾನದ ಮೂಲಕ ಕಸ ವಿಂಗಡಣೆ ಮಾಡದೆ ಸುಡುವಂತಹ ತಂತ್ರಜ್ಞಾನವಿದೆ. ಇದನ್ನು ಅಳವಡಿಸುವ ಬಗ್ಗೆ ನಿರ್ಧರಿಸಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪ್ರಮುಖರಾದ ಕೊಣಿಯಂಡ ಬೋಜಮ್ಮ, ಅಬ್ದುಲ್ ಸಮ್ಮದ್, ಅಲ್ಲುಮಾಡ ಸುನಿಲ್, ಸುನಿಲ್ ಮಾದಪ್ಪ, ಕಾಶಿ, ಸುಜಯ್ ಬೋಪಯ್ಯ, ಗ್ರಾ.ಪಂ. ಸದಸ್ಯರಾದ ಮಮಿತಾ, ರಾಜಶೇಖರ್, ತನ್ವಿರ್ ಅಹಮ್ಮದ್ ಸಲಹೆ ನೀಡಿದರು.

ಗೋಣಿಕೊಪ್ಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ಹೆಚ್.ಕೆ. ಜಗದೀಶ್ ಉಪಸ್ಥಿತರಿದ್ದರು.