ಸುಂಟಿಕೊಪ್ಪ, ಆ. 30: ಚೆಸ್ಕಾಂ ಇಲಾಖೆಯು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿಯಾದ ಘಟನೆ ವರದಿಯಾಗಿದೆ. ಖಾಸಗಿ ವಾಣಿಜ್ಯ ಮಳಿಗೆ, ಕಟ್ಟಡ ವಾಸದ ಮನೆಗಳ ವಿದ್ಯುತ್ ಬಿಲ್ಲನ್ನು ಪಾವತಿಸದೆ ಇರುವ ಬಗ್ಗೆ ಚೆಸ್ಕಾಂ ಇಲಾಖೆ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸುವದು ಸರ್ವೆ ಸಾಮಾನ್ಯ, ಆದರೆ ಗ್ರಾಮ ಪಂಚಾಯಿತಿಯ ವಿದ್ಯುತ್ ಕಡಿತಗೊಂಡಿರುವದು ಇತಿಹಾಸದಲ್ಲೇ ಪ್ರಥಮವಾಗಿದೆ.
ಸುಂಟಿಕೊಪ್ಪ ಸೋಮವಾರಪೇಟೆ ತಾಲೂಕಿನಲ್ಲಿ ಗ್ರೇಡ್ 1 ಪಂಚಾಯಿತಿಯಾಗಿ 20 ಜನ ಸದಸ್ಯ ಬಲವನ್ನು ಹೊಂದಿದೆ. ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದ್ದು, ಸುತ್ತ ಮುತ್ತಲಿನ 10 ಗ್ರಾಮ ಪಂಚಾಯಿತಿ ಒಳಗೊಂಡಿರುವ ಕೇಂದ್ರ ಸ್ಥಾನವಾಗಿದೆ. ಸುಂಟಿಕೊಪ್ಪ ಗ್ರಾ.ಪಂ.ಗೆ ಚೆಸ್ಕಾಂ ಶಾಕ್...!(ಮೊದಲ ಪುಟದಿಂದ) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯುತ್ ಬಿಲ್ ಪಾವತಿಸಲು ಕ್ರಮ ಕೈಗೊಳ್ಳದಿದ್ದು, ಇಂದು ಪಂಚಾಯಿತಿ ಕಚೇರಿಗೆ ಆಗಮಿಸಿದ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಚೆಸ್ಕಾಂಗೆ ಪಂಚಾಯಿತಿ ರೂ. 38 ಲಕ್ಷ ಬಾಕಿ ಉಳಿಸಿಕೊಂಡಿರುವದು ಬಹಿರಂಗಗೊಂಡಿದೆ.
ಪಂಚಾಯಿತಿಗೆ ವಿವಿಧ ದಾಖಲಾತಿ ಇನ್ನಿತರ ಕೆಲಸ ಕಾರ್ಯಗಳಿಗೆ ಆಗಮಿಸಿದ್ದ ಗ್ರಾಮಸ್ಥರು ಪಂಚಾಯಿತಿ ದಿವಾಳಿ ಪರಿಸ್ಥಿತಿ ಬಗ್ಗೆ ಮನದಲ್ಲೇ ಗೊಣಗಿಕೊಳ್ಳುತ್ತಿದ್ದ ದೃಶ್ಯ ಎದುರಾಯಿತು.