ಸಿದ್ದಾಪುರ, ಆ.30: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು.ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಮನೆಗಳನ್ನು ಕಳೆದುಕೊಂಡಿರುವವರಿಗೆ ಶಾಶ್ವತ ಸೂರು ಒದಗಿಸುವಂತೆ ಸರಕಾರಕ್ಕೆ ಒತ್ತಾಯ ಮಾಡುವದಾಗಿ ತಿಳಿಸಿದ ಅವರು, ಈ ಬಾರಿ ರಾಜ್ಯದಲ್ಲಿ ಕಂಡು ಕೇಳರಿಯದಷ್ಟು ಪ್ರವಾಹದಿಂದಾಗಿ ಪ್ರಾಣ ಹಾನಿ ಜಾನುವಾರು ಕೃಷಿ ಫಸಲುಗಳು ನಾಶವಾಗಿವೆ. ಎಲ್ಲಾ ನದಿಗಳು ಪ್ರವಾಹದಿಂದಾಗಿ ಮೈದುಂಬಿ ಹರಿದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಪೀಡಿತ ರಾಜ್ಯ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿ, ಕೂಡಲೇ ರಾಜ್ಯಕ್ಕೆ 5 ಸಾವಿರ ಕೋಟಿ ಬಿಡುಗಡೆಗೊಳಿಸ ಬೇಕೆಂದು ಆಗ್ರಹ ಪಡಿಸಿದರು. ಈ ಬಾರಿ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹದಿಂದ ಅನಾಹುತ ಸಂಭವಿಸಿದ್ದು, ಇದುವರೆಗೂ ಕೇಂದ್ರದಿಂದ ಒಂದು ರೂಪಾಯಿ ಕೂಡಾ ಬಿಡುಗÀಡೆ ಮಾಡಿಲ್ಲ. ರಾಜ್ಯದಿಂದ 25 ಸಂಸದರು ಹಾಗೂ ಈ ಪೈಕಿ ಮೂರು ಮಂದಿ ಕೇಂದ್ರ ಸಚಿವರಿದ್ದರೂ, ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡಾ ಕೇಂದ್ರ ಸರಕಾರಕ್ಕೆ ಮನವಿಯನ್ನು ಕೂಡಾ ಸಲ್ಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ಮೋದಿ ಅವರು ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಬಾರದೆ ಇರುವದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ವಾರ ಅವರು ಕಾರ್ಯಕ್ರಮದ ನಿಮಿತ್ತ ಬರುತ್ತಾರೆ ಹೊರತು ರಾಜ್ಯದ ಬಗ್ಗೆ ಕಾಳಜಿಯಿಂದ ಅಲ್ಲ ಎಂದುಟೀಕಿಸಿದರು. ನಂತರ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡುವಿನ ನದಿ ದಡದಲ್ಲಿ
(ಮೊದಲ ಪುಟದಿಂದ) ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿದ್ದ ಮನೆಗಳನ್ನು ವೀಕ್ಷಿಸಿದರು. ಅಲ್ಲದೆ ಅಲ್ಲಿನ ಸಂತ್ರಸ್ತರೊಂದಿಗೆ ಮಾತನಾಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಕೊಂಡರು. ಇದೇ ಸಂದರ್ಭ ದಲ್ಲಿ ಸಂತ್ರಸ್ತರಾದ ಕರಡಿಗೋಡು ನಿವಾಸಿ ಎಂ.ಎ ಕೃಷ್ಣ ಹಾಗೂ ಬೈಜು ಮಾತನಾಡಿ, ನಾವು ಕಳೆದ ಸುಮಾರು ವರ್ಷಗಳಿಂದ ನದಿ ದಡದಲ್ಲಿ ವಾಸಮಾಡಿಕೊಂಡಿದ್ದೇವೆ. ಮನೆ ಕಂದಾಯ ಪಾವತಿಸುತ್ತಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದುಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಅಲ್ಲದೆ ವಸತಿ ಯೋಜನೆ ಅಡಿಯಲ್ಲಿ ಸರಕಾರದಿಂದ ಮಂಜೂರಾಗುವ ಸಹಾಯ ದನದಿಂದ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡಿಕೊಂಡಿ ದ್ದೇವೆ ಎಂದರು.
ವರ್ಷಂಪ್ರತಿ ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿಯಿಂದ ಪ್ರವಾಹ ಏರಿಕೆಯಾಗಿ ಈ ಭಾಗದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದ 120 ಕುಟುಂಬಗಳು ಕಳೆದ ವರ್ಷ ಗ್ರಾ.ಪಂ ಮೂಲಕ ನಮ್ಮನ್ನು ಸ್ಥಳಾಂತರಗೊಳಿಸಿ ಸುರಕ್ಷಿತ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಿಕೊಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಜಿಲ್ಲಾಡಳಿತ ಯಾವದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದರು. ಈ ಭಾಗದ ನಿವಾಸಿಗಳನ್ನು ರಾಜಕೀಯ ಪಕ್ಷಗಳು ಓಟ್ ಬ್ಯಾಂಕಾಗಿ ಪರಿವರ್ತನೆ ಮಾಡಿಕೊಂಡು ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ದರು. ಅಲ್ಲದೆ ಗುರುವಾರದಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮೀಪದ ಗ್ರಾಮಕ್ಕೆ ಬಂದಿದ್ದರೂ ಕೂಡಾ ಕರಡಿಗೋಡಿಗೆ ಭೇಟಿ ನೀಡದೆ ಹಿಂತಿರುಗಿರುವದರಿಂದ ನಮಗೆ ನೋವಾಗಿದೆ ಎಂದು ಅಳಲನ್ನು ತೋಡಿಕೊಂಡರು. ಇದೇ ಸಂದರ್ಭ ದಲ್ಲಿ ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಓ ಅವರಿಗೆ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡುವಂತೆ ಹಾಗೂ ಶಾಶ್ವತ ಸೂರು ಒದಗಿಸಿಕೊಡಲು ಮುತವರ್ಜಿ ವಹಿಸುವಂತೆ ಮಾಜಿ ಸಿ.ಎಂ ಸೂಚಿಸಿದರು.
ನಂತರ ನೆಲ್ಯಹುದಿಕೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಅಲ್ಲಿನ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸಂತ್ರಸ್ತರು ಮಾತನಾಡಿ, ನಾವುಗಳು ಕಳೆದು ಹಲವು ದಿನಗಳಿಂದ ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರ ದಲ್ಲಿದ್ದು, ಶಾಶ್ವತ ಸೂರು ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಈ ಭಾಗದಲ್ಲಿ ಸಾಕಷ್ಟು ಪೈಸಾರಿ ಜಾಗಗಳಿದ್ದರೂ ಪ್ರಭಾವಿಗಳು ಒತ್ತುವರಿ ಮಾಡಿ ಕೊಂಡಿದ್ದು, ಅದನ್ನು ಸರಕಾರದ ಮೂಲಕ ತೆರವುಗೊಳಿಸಿ ನಮಗೆ ಶಾಶ್ವತ ಸೂರು ಕಲ್ಪಿಸಿಕೊಡುವಂತೆ ಕೋರಿಕೊಂಡರು.
ಸ್ಥಳದಲ್ಲಿದ್ದ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಅವರಿಗೆ ಪೈಸಾರಿ ಜಾಗಗಳನ್ನು ಗುರುತಿಸಿ ಸಂತ್ರಸ್ತರಿಗೆ ಶಾಶ್ವತ ಸೂರನ್ನು ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಶಾಸಕ ಅರುಣ್ ಮಾಚಯ್ಯ, ವೆಂಕಟೇಶ್, ಡಿಸಿಸಿ ಅಧ್ಯಕ್ಷ ಕೆ.ಕೆ ಮಂಜುನಾಥ್ ಕುಮಾರ್, ಜಿ.ಪಂ ಸದಸ್ಯೆ ಕೆ.ಪಿ ಚಂದ್ರಕಲಾ, ಸುನಿತಾ ಮಂಜುನಾಥ್, ಪ್ರಮುಖರಾದ ಟಿ.ಪಿ ರಮೇಶ್, ಚಂದ್ರ ಮೌಳಿ, ಸೂರಯ್ಯ ಅಬ್ರಾರ್, ಲೋಕೇಶ್ ಕುಮಾರ್, ಆರ್.ಕೆ ಸಲಾಂ, ಎಸ್ಎನ್ ಬುಜಂಗ, ಪ್ರತೀಶ್, ವಿ.ಕೆ ಬಶೀರ್, ಎಂ.ಹೆಚ್ ಮೂಸಾ, ಶುಹದಾ, ಹಕೀಂ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು ಇದ್ದರು.
ತೋರ ಗ್ರಾಮದ ಸಂತ್ರಸ್ತರ ಭೇಟಿ
ವೀರಾಜಪೇಟೆ: ಇಪ್ಪತ್ತೊಂದು ದಿನಗಳ ಹಿಂದೆ ಸಮೀಪದ ತೋರ ಗ್ರಾಮದಲ್ಲಿ ಉಂಟಾದ ಜಲಪ್ರಳಯ ದಿಂದ ಹತ್ತು ಮಂದಿ ಜಲಸಮಾಧಿ ಯಾದ ಸ್ಥಳಕ್ಕೆ ಇಂದು ಸಂಜೆ ತೆರಳಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳುವದರೊಂದಿಗೆ ಎಲ್ಲ ಸಂತ್ರಸ್ತರಿ ಗೂ ಸೂಕ್ತ ಹಾಗೂ ನ್ಯಾಯ ಸಮ್ಮತವಾದ ಪರಿಹಾರ ಒದಗಿಸಲು ಸಂಬಂಧಿಸಿದಂತೆ ಸರಕಾರ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವದು ಎಂದರು.
ತೋರ ಗ್ರಾಮದಲ್ಲಿ ಜಲ ಸಮಾಧಿಯಾದ ಹತ್ತು ಮಂದಿಯ ಪೈಕಿ ಆರು ಮಂದಿಯ ಮೃತದೇಹ ಪತ್ತೆಯಾಗಿದ್ದು, ಉಳಿದವರ ಮೃತದೇಹಕ್ಕಾಗಿ ಶೋಧ ಮುಂದುವರೆ ದಿದೆ. ನಾಪತ್ತೆಯಾದವರ ಮೃತ ದೇಹಗಳ ವಾರಸುದಾರರಿಗೆ ಅಧಿಕಾರಿ ಗಳು ರೂ ಒಂದು ಲಕ್ಷ ನೀಡಲು ತೀರ್ಮಾನಿಸಿದ್ದು ಇದನ್ನು ಒಪ್ಪದ ಸಿದ್ಧರಾಮಯ್ಯ ಅವರು, ಎಲ್ಲ ರಂತೆಯೇ ನಾಪತ್ತೆಯಾದ ಮೃತದೇಹದ ವಾರಸುದಾರರಿಗೂ ರೂ 5ಲಕ್ಷ ಕೊಡಬೇಕು. ಜಲಪ್ರಳಯದ ದುರಂತದಿಂದ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ತಾರತಮ್ಯವಿಲ್ಲದೆ ಮನೆ ಕಟ್ಟಿಕೊಡುವದರೊಂದಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಆಗ್ರಹಿಸುವದಾಗಿ ಹೇಳಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ ಮಾತನಾಡಿ ಒಂದರಿಂದ ಎರಡು ಎಕರೆಗಳಷ್ಟು ಕಾಫಿ ತೋಟ ಕಳೆದುಕೊಂಡವರಿಗೆ ಮೂರು ಮುಕ್ಕಾಲು ಸೆಂಟು ಜಾಗಕ್ಕನುಗುಣವಾಗಿ ಪರಿಹಾರ ನೀಡಲಾಗುವದು ಎಂದು ಅಧಿಕಾರಿಗಳು ಸಂತ್ರಸ್ತರಿಗೆ ತಿಳಿಸಿದ್ದಾರೆ. ಇದರಿಂದ ಸಂತ್ರಸ್ತರಿಗೆ ಯಾವದೇ ಪ್ರಯೋಜನವಾಗುವದಿಲ್ಲ. ಸೂಕ್ತ ನ್ಯಾಯ ಸಮ್ಮತವಾದ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ ಮಾತನಾಡಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸದಂತೆ ನೋಡಿಕೊಳ್ಳಬೇಕು. ತೋಟ, ಮನೆ ಕಳೆದುಕೊಂಡ ಸಣ್ಣ ಹಿಡುವಳಿದಾರ ಫಲಾನುಭವಿಗಳಿಗೆ ಅದೇ ಗ್ರಾಮದಲ್ಲಿ ಮನೆ ಹಾಗೂ ಜಾಗ ನೀಡಲು ಕ್ರಮ ಕೈಗೊಳ್ಳುವಂತೆ ಸಿದ್ಧ ರಾಮಯ್ಯ ಅವರನ್ನು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಎಂ.ಎಲ್.ಸಿ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಸಮಿತಿ ಅಧ್ಯಕ್ಷ ಮಂಜುನಾಥ್, ಟಿ.ಪಿ.ರಮೇಶ್, ಚಂದ್ರಮೌಳಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ಆಗಸ್ಟಿನ್ ಮತ್ತಿತರರು ಹಾಜರಿದ್ದರು. ಸಿದ್ದರಾಮಯ್ಯ ಅವರ ಭೇಟಿಗಾಗಿ ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಕಾದಿದ್ದ ಪಕ್ಷದ ಕಾರ್ಯಕರ್ತರು ರಾತ್ರಿ 7ಗಂಟೆಗೆ ನಿರಾಶರಾಗಿ ಮನೆಗೆ ಹಿಂದಿರುಗಿದರು.
-ಚಿತ್ರ, ವರದಿ: ಎ.ಎನ್. ವಾಸು, -ಡಿ.ಎಂ.ಆರ್., ಕೆ.ಕೆ.ಎಸ್.