ಮಡಿಕೇರಿ, ಆ.30: ಕಳೆದ ವರ್ಷದಂತೆ ಈ ಬಾರಿಯೂ ಅತಿವೃಷ್ಟಿಯಿಂದಾಗಿ ಕೃಷಿಕರು ಮತ್ತು ಕಾರ್ಮಿಕರು ತುಂಬಾ ತೊಂದರೆಗೆ ತುತ್ತಾಗಿದ್ದು, ಸಾಲ ವಸೂಲಾತಿಯಲ್ಲಿ ಸ್ವಲ್ಪ ಮಟ್ಟಿಗಾದರೂ ಮಾನವೀಯತೆ ತೋರಿಸುವಂತೆ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಸಲಹೆ ಮಾಡಿದ್ದಾರೆ.

ನಗರದ ಕಾರ್ಪೋರೇಷನ್ ಬ್ಯಾಂಕಿನ ಲೀಡ್ ಬ್ಯಾಂಕ್ ಸಭಾಂಗಣ ದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕರ್ಸ್‍ಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಭೂಕುಸಿತದಿಂದಾಗಿ ಮನೆ ಮಠ ಕಳೆದುಕೊಳ್ಳುವಂತಾಯಿತು. ಈ ವರ್ಷ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಸಾಕಷ್ಟು ತೊಂದರೆ ಉಂಟಾಯಿತು, ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಈ ಸಂಬಂಧ ರೈತರು ಹಾಗೂ ಕಾರ್ಮಿಕರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.ಶೈಕ್ಷಣಿಕ ಸಾಲವನ್ನು ಸಕಾಲದಲ್ಲಿ ಒದಗಿಸಬೇಕು. ಬ್ಯಾಂಕುಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಸ್ವಲ್ಪ ನಿಯಮಗಳನ್ನು ಸಡಿಲಿಸಿ ಸಾಲವನ್ನು ಮಂಜೂರು ಮಾಡುವಂತೆ ಶಾಸಕರು ಹೇಳಿದರು. ಅಂಬೇಡ್ಕರ್, ವಾಲ್ಮೀಕಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ

(ಮೊದಲ ಪುಟದಿಂದ) ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ತ್ವರಿತವಾಗಿ ಸಾಲ ಕಲ್ಪಿಸುವಂತೆ ಅವರು ನಿರ್ದೇಶನ ನೀಡಿದರು. ಸರ್ಕಾರದ ಮುದ್ರಾ, ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ, ಸಾಮಾಜಿಕ ಸುರಕ್ಷಿತ ಯೋಜನೆಗಳಾದ ಅಪಘಾತ ವಿಮೆ, ಮಾಸಾಶನ ಮತ್ತಿತರವನ್ನು ಸಾರ್ವಜನಿಕರಿಗೆ ತಲಪಿಸುವಂತಾಗ ಬೇಕು ಎಂದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ಬ್ಯಾಂಕುಗಳು ರೈತರು ಹಾಗೂ ಇತರರಿಗೆ ಸಾಲ ಸೌಲಭ್ಯ ಒದಗಿಸಬೇಕು. ಬ್ಯಾಂಕುಗಳು ಉಳಿಯಬೇಕು ಮತ್ತು ಜೊತೆಗೆ ಗ್ರಾಹಕರು ಸಹ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ಮಾಡಿದರು. ಕಾಫಿ ಬೆಳೆಗಾರರನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಬ್ಯಾಂಕುಗಳ ಅಧಿಕಾರಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ ಬ್ಯಾಂಕುಗಳು ತಾವು ನಿಗದಿಪಡಿಸಿದ ಗುರಿ ತಲಪುವದರ ಜೊತೆಗೆ ಕೃಷಿ, ಸಣ್ಣ ಕೈಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ವಿವಿಧ ಇಲಾಖೆಗಳು ಮತ್ತು ಬ್ಯಾಂಕ್‍ಗಳು ಹೊಂದಾಣಿಕೆಯಿಂದ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗುವಂತೆ ತಿಳಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಮಾತನಾಡಿ ಬ್ಯಾಂಕುಗಳಿಂದ ಗ್ರಾಹಕರಿಗೆ ಯಾವದೇ ರೀತಿ ತೊಂದರೆಯಾಗದಂತೆ ಗಮನಹರಿಸಲಾಗಿದೆ ಎಂದು ಹೇಳಿದರು.

ನಬಾರ್ಡ್‍ನ ಜಿಲ್ಲಾ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಮಾತನಾಡಿ ಬೆಳೆ ಸಾಲ, ಅಲ್ಪಾವಧಿ ಸಾಲ, ಸಣ್ಣ, ಮಧ್ಯಮ ಉದ್ಯಮಗಳು ಹೀಗೆ ಹಲವು ಕ್ಷೇತ್ರಗಳಿಗೆ ಸಾಲವನ್ನು ನೀಡಲಾಗುತ್ತಿದ್ದು, ಪ್ರಗತಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ 5,500 ಕೋಟಿ ರೂ. ಸಾಲ ನೀಡುವ ಗುರಿ ಇದ್ದು, ಇದರಲ್ಲಿ ಏಪ್ರಿಲ್‍ನಿಂದ ಜೂನ್ ಅಂತ್ಯದವರೆಗೆ 1470 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೃಷಿ, ಅವಧಿ ಸಾಲ, ಕೃಷಿ ಸಂಬಂಧಿಸಿದ ಇತರ ಸೇರಿದಂತೆ ಒಟ್ಟು 3,660 ಕೋಟಿ ರೂ. ಗುರಿಯಲ್ಲಿ 709 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಣ್ಣ, ಮಧ್ಯಮ ಕೈಗಾರಿಕಾ ವಲಯ ಹಾಗೂ ಇತರ ಉದ್ಯಮ ವಲಯಕ್ಕೆ 4,500 ಕೋಟಿ ರೂ. ಗುರಿಯಲ್ಲಿ 1,335 ಕೋಟಿ ರೂ. ವಿತರಿಸಲಾಗಿದೆ. ಇತರ ಆದ್ಯತಾ ವಲಯಕ್ಕೆ ಸಂಬಂಧಿಸಿದಂತೆ 1,000 ಗುರಿಯಲ್ಲಿ 135 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಮುಂಡಂಡ ಸಿ.ನಾಣಯ್ಯ ಅವರು ಮಾಹಿತಿ ನೀಡಿದರು. ಕಾರ್ಪೋರೇಷನ್ ಬ್ಯಾಂಕಿನ ಮೈಸೂರು ವಲಯದ ಸಿ.ವಿ.ಮಂಜುನಾಥ್, ಬೆಂಗಳೂರು ಆರ್‍ಬಿಐನ ದತ್ತಾತ್ರಿ, ನಬಾರ್ಡ್‍ನ ನೂತನ ಅಧಿಕಾರಿ ಶ್ರೀನಿವಾಸ್ ಹಾಗೂ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಇತರರು ಇದ್ದರು.