ಮಡಿಕೇರಿ, ಆ. 30: ಮಡಿಕೇರಿಯ ಕನ್ನಿಕಾ ಬಡಾವಣೆಯಲ್ಲಿರುವ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಕೊಡಗು ಜಾನಪದ ಪರಿಷತ್ ವತಿಯಿಂದ ಮಕ್ಕಳಿಗೆ ಜಾನಪದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು, ಹಿರಿಯರಿಂದ ಬೆಳೆದು ಬಂದಿರುವ ಜಾನಪದ ಬದುಕಿನ ಕುರಿತು ಮಕ್ಕಳಿಗೆ ತಿಳಿಸುತ್ತಾ, ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ ಜೀವನಕ್ಕೆ ಗ್ರಾಮೀಣ ಜೀವನ ಭದ್ರ ಬುನಾದಿ ಹಾಕಿಕೊಟ್ಟಿದ್ದಾಗಿ ನೆನಪಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸೋನುಪ್ರೀತು ಹಾಗೂ ಅತಿಥಿಗಳು ಗಿಡಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂತಹ ಚಟುವಟಿಕೆ ಮೂಲಕ ಮಕ್ಕಳಿಗೆ ಜಾನಪದದ ಸೊಗಡು ಆಗಿಂದಾಗ್ಗೆ ತಿಳಿಸುವಂತೆ ಸೋನು ಸಲಹೆ ನೀಡಿದರು. ಪರಿಷತ್ತಿನ ಹಿರಿಯ ಸದಸ್ಯೆ ಅಂಬೆಕಲ್ ಸುಶೀಲ ಕುಶಾಲಪ್ಪ ಹಾಗೂ ವಿದ್ಯಾರ್ಥಿನಿ ಕೀರ್ತಿಕಾ ಜಾನಪದ ಗೀತೆಯೊಂದಿಗೆ ಗಮನ ಸೆಳೆದರು. ಪರಿಷತ್ತಿನ ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಸ್ವಾಗಿತಿಸಿದರು. ಹಿರಿಯ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಗೀತಾ ಸಂಪತ್ ಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಿರಿಯರಾದ ರಾಣಿ ಮಾಚಯ್ಯ ವಂದಿಸಿದರು.