ನಾಪೆÇೀಕ್ಲು, ಆ. 29: ನಾಲ್ಕುನಾಡು ವ್ಯಾಪ್ತಿಯಲ್ಲಿ ಈ ವರ್ಷ ಸುರಿದ ಭಾರೀ ಗಾಳಿ - ಮಳೆ, ಜನರ, ಬೆಳೆಗಾರರ ಬದುಕನ್ನೆ ಬುಡಮೇಲು ಮಾಡಿದೆ. 1962ರ ನಂತರ ಇಲ್ಲಿ ಅತೀ ಹೆಚ್ಚು ಪ್ರವಾಹ ಉಂಟಾಗಿರುವದು ಪ್ರಸ್ತುತ ವರ್ಷ ಎನ್ನುತ್ತಾರೆ ಇಲ್ಲಿನ ಹಿರಿಯರು. ಪ್ರಕೃತಿ ವಿಕೋಪಕ್ಕೆ ಮನೆ, ಗದ್ದೆ, ತೋಟ ಕೊಚ್ಚಿಹೋಗಿರುವದು ಒಂದೆಡೆಯಾದರೆ, ಪ್ರವಾಹದಿಂದ ಮುಳುಗಿದ ಕಾಫಿ ತೋಟಗಳು ಈಗ ಫಸಲಿನೊಂದಿಗೆ ಕಪ್ಪು ಬಣ್ಣಕ್ಕೆ ತಿರುಗಿ ಸಾಯಲಾರಂಭಿಸಿವೆ. ಉಳಿದಿರುವ ಕಾಫಿ ತೋಟಗಳಲ್ಲಿ ಕಾಫಿ ಫಸಲು ಬಹುತೇಕ ನೆಲಕಚ್ಚಿದೆ. ಬಿಸಿಲು ಆರಂಭಗೊಂಡರೆ ಉಳಿದ ಫಸಲು ಉಳಿಯಲು ಸಾಧ್ಯವಿಲ್ಲ ಎನ್ನುತ್ತಾರೆ ಬೆಳೆಗಾರರು. ಕಾಫಿ ತೋಟವನ್ನೆ ನಂಬಿ ಮನೆ ನಿರ್ಮಾಣ, ಮಕ್ಕಳ ಮದುವೆ, ವಿದ್ಯಾಭ್ಯಾಸಕ್ಕೆ ಲೆಕ್ಕಾಚಾರ ಮಾಡುತ್ತಿದ್ದ ಕೃಷಿಕರ, ಬೆಳೆಗಾರರ ಬದುಕು ಮೂರಾಬಟ್ಟೆಯಂತಾಗಿದೆ.
ರಭಸದ ಗಾಳಿ: ಮಳೆಯೊಂದಿಗೆ ರಭಸದ ಗಾಳಿ ಬೀಸಿದ ಪರಿಣಾಮ ಬೆಟ್ಟ ಪ್ರದೇಶಕ್ಕೆ ಹೊಂದಿ ಕೊಂಡಂತಿರುವ ಚೇಲಾವರ, ನಾಲಡಿ, ಯವಕಪಾಡಿ, ಕುಂಜಿಲ, ಮರಂದೋಡ, ನೆಲಜಿ, ಪೇರೂರು ಗ್ರಾಮಗಳಲ್ಲಿ ಕಾಫಿ ಗಿಡಗಳ ರೆಂಬೆ ಮುರಿದು ಬಿದ್ದಿರುವದರೊಂದಿಗೆ, ಕೊಂಬೆಗಳು ಒಂದಕ್ಕೊಂದು ಸ್ಪರ್ಶಗೊಂಡು ಹೆಚ್ಚಿನ ಫಸಲು ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಬೆಳೆಗಾರನ ಕೈಬಿಟ್ಟ ಕಾವೇರಿ ಕಾಫಿ: ಬೆಟ್ಟ ಪ್ರದೇಶಗಳಲ್ಲಿ ಬೆಳೆಗಾರರು ಕಾವೇರಿ, ಕಟುವಾಯಿ, ಬ್ರೆಜಿಲ್ ಮತ್ತಿತರ ಕಾಫಿ ತಳಿಗಳನ್ನು ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಹಲವು ಬೆಳೆಗಾರರು ಅದನ್ನು ಮುಖ್ಯ ಬೆಳೆಯೆಂದೆ ಪರಿಗಣಿಸಿದರು. ತೋಟದ ನಿರ್ವಹಣೆ ಮತ್ತಿತರ ಖರ್ಚಿಗೆ ಇದು ವರದಾನವಾಗಿತ್ತು. ಆದರೆ ಈ ಭಾರಿಯ ಮಳೆ ಅದನ್ನೂ ಬೆಳೆಗಾರರ ಕೈಗೆಟುಕದೆ ಮಾಡಿದೆ. ಅಲ್ಲಲ್ಲಿ ಉಳಿಕೆಯಾಗಿರುವ ಕಾವೇರಿ ಕಾಫಿ ಹಣ್ಣಾಗಿ ಉದುರುತ್ತಿರುವ ಮೂಲಕ ಬೆಳೆಗಾರರ ಚಿತ್ತ ಕೆಡಿಸುತ್ತಿದೆ.
ಸಾಯುತ್ತಿರುವ ಕಾಳು ಮೆಣಸು ಬಳ್ಳಿಗಳು: ಕಾಳು ಮೆಣಸು ಬೆಲೆ ಕುಸಿತದಿಂದ, ಉತ್ಪಾದನೆ ಕೊರತೆಯಿಂದ ಕಂಗೆಟ್ಟ ಬೆಳೆಗಾರರಿಗೆ ಕಾಳು ಮೆಣಸಿನಿಂದ ಪುಡಿಕಾಸಾದರೂ ದೊರೆಯುತ್ತಿತ್ತು. ಆದರೆ ಈ ಬಾರಿ ಕಾಳು ಮೆಣಸು ಬಳ್ಳಿಗಳಲ್ಲಿ ತೀವೃತರದ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಬಳ್ಳಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಾಳು ಮೆಣಸು ಬಳ್ಳಿಗಳು ಸಂಪೂರ್ಣ ನಾಶವಾಗುವ ಭೀತಿ ಬೆಳೆಗಾರರಲ್ಲಿ ಮೂಡಿದೆ.
ಶುಂಠಿ ಕೃಷಿಕರಿಗೂ ಚಿಂತೆ: ಕೊಡಗಿನಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಶುಂಠಿ ಕೃಷಿಯಿಂದ ಹಲವರು ಕೈ ಸುಟ್ಟುಕೊಂಡಿದ್ದಾರೆ. ಆದರೆ ಈ ವರ್ಷ ಶುಂಠಿಗೆ ಉತ್ತಮ ಧಾರಣೆಯಿದೆ. ಹೆಚ್ಚಾದ ಮಳೆಯ ಪರಿಣಾಮ ಶುಂಠಿ ಬೆಳೆಯಲ್ಲಿ ಕೊಳೆ ರೋಗ ಕಾಣಿಸಿಕೊಂಡಿರುವದು ಅದಕ್ಕೂ ಹೆಚ್ಚು ನೀರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಕೃಷಿಕರು.
ಭತ್ತ ಕೃಷಿಗೂ ಸಮಸ್ಯೆ: ಈ ಸಮಸ್ಯೆಯಿಂದ ಭತ್ತದ ಕೃಷಿಕರೂ ಹೊರತಾಗಿಲ್ಲ. ಕೂಲಿ ಕಾರ್ಮಿಕರ ಕೊರತೆ ಹಾಗೂ ಇತರ ತೊಂದರೆಗಳಿಂದ ಭತ್ತ ಬೆಳೆಯುವವರು ವಿರಳವಾಗಿದ್ದಾರೆ. ಹಲವೆಡೆಗಳಲ್ಲಿ ಭತ್ತದ ಪೈರು ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿ ನಾಟಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಟಿ ಮಾಡಿದ ಗದ್ದೆಗಳನ್ನು ಭೂ ಕುಸಿತದ ಮಣ್ಣು ಆಪೆÇೀಷನಗೈದಿದೆ. ಇದರಿಂದ ಮುಂದಿನ ವರ್ಷದ ಅನ್ನಕ್ಕೂ ಕುತ್ತು ಬಂದಿದೆ ಎನ್ನುತ್ತಾರೆ ಭತ್ತದ ಕೃಷಿಕರು.
ರೈನ್ ರಾಯಲ್ಟಿ (ಮಳೆ ರಾಜಧನ) ನೀಡಲು ಒತ್ತಾಯ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಕಾಫಿ ಫಸಲಿನಲ್ಲಿ ನಷ್ಟ ಉಂಟಾಗುತ್ತಿರುವದು ಕಂಡು ಬರುತ್ತಿದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿರುವ ಟಾಟಾ ಕಾಫಿ ಸಂಸ್ಥೆಗೆ ಈ ಸೌಲಭ್ಯ ನೀಡಲಾಗುತ್ತಿದೆ. ಆದುದರಿಂದ ಪಶ್ಚಿಮ ಘಟ್ಟ ಪ್ರದೇಶದ ಕಾಫಿ ಬೆಳೆಗಾರರಿಗೂ ಈ ಸೌಲಭ್ಯವನ್ನು ಒದಗಿಸಲು ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕೆಂದು ಈ ವಿಭಾಗದ ಬೆಳೆಗಾರರು ಒತ್ತಾಯಿಸುತ್ತಲೇ ಬರುತ್ತಿದ್ದಾರೆ.
-ಪಿ.ವಿ.ಪ್ರಭಾಕರ್
ಕೊಡಗಿನಲ್ಲಿ ಕಾಂಗ್ರೆಸ್ ಬಲಪಡಿಸಲು ಶ್ರಮಿಸಬೇಕು
ಸೋಮವಾರಪೇಟೆ, ಆ. 29: ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಅಧಿಕಾರದಲ್ಲಿರುವ ನಾಯಕರುಗಳು ಇನ್ನಷ್ಟು ಶ್ರಮಿಸಬೇಕು ಎಂದು ಸದಸ್ಯೆ ವೀಣಾ ಅಚ್ಚಯ್ಯ ಕರೆ ನೀಡಿದರು.
ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಸಮೀಪ ನೂತನವಾಗಿ ತೆರೆಯಲಾಗಿ ರುವ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವಾಗಿದ್ದು, ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎಲ್ಲಾ ನಾಯಕರೂ ಶ್ರಮವಹಿ ಸಬೇಕು ಎಂದು ಅಭಿಪ್ರಾಯಿಸಿದರು.
ಹೊಸ ಮುಖಗಳನ್ನು ಪಕ್ಷಕ್ಕೆ ಕರೆತರಬೇಕು. ಯುವ ಜನಾಂಗಕ್ಕೆ ಕಾಂಗ್ರೆಸ್‍ನ ತತ್ವ ಸಿದ್ಧಾಂತಗಳನ್ನು ಮನವರಿಕೆ ಮಾಡಿ ಪಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸ ಬೇಕು. ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ಮಾಡಬೇಕು ಎಂದು ವೀಣಾ ಅಚ್ಚಯ್ಯ ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
‘ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ದೇಶಕ್ಕೆ ಒಳಿತಾಗುವ ಕೆಲಸ ಮಾಡಿದ್ರೆ ಒಪ್ಪೋಣ;ಒಳ್ಳೆ ಕೆಲ¸ Àಗಳನ್ನು ನಾವುಗಳೂ ಸಹ ಸ್ವಾಗತಿಸ ಬೇಕು. ಮುಂದೆ ಚುನಾವಣೆ ಯನ್ನು ಸ್ಪರ್ಧಿಸಲು ಬೆಂಗಳೂರಿಗರು ಬಂದರೆ ಸಹಕಾರ ನೀಡುವದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಮಾತನಾಡಿ, ವೈಫಲ್ಯಗಳನ್ನು ಬದಿಗಿಟ್ಟು ಕೊಡಗನ್ನು ಮತ್ತೆ ಕಾಂಗ್ರೆಸ್‍ನ ಭದ್ರಕೋಟೆಯನ್ನಾಗಿ ಮಾಡಬೇಕಿದೆ. ಹಿಂದೊಮ್ಮೆ ಅಸಾಧಾರಣ ಶಕ್ತಿಯಾಗಿದ್ದ ಕಾಂಗ್ರೆಸ್, ಕೊಂಚ ಮೈಮರೆತಿದ್ದರಿಂದ ಇಂದು ಹಿನ್ನಡೆ ಅನುಭವಿಸುವಂತಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಕಾಂಗ್ರೆಸ್‍ನ ಸಾಧನೆ ಗಳನ್ನು ಗ್ರಾಮ ಮಟ್ಟದಲ್ಲಿ ಪ್ರಚುರ ಪಡಿಸಬೇಕು. ಯುವಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ಕಾಂಗ್ರೆಸ್ ಮೇಲಿ ದ್ದರೂ ಸಹ ಇವಿಎಂ ದೋಷದಿಂದ ಸೋಲುಂಟಾಗಿದೆ ಎಂದು ಅಭಿಪ್ರಾಯಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ದೇಶಭಕ್ತಿಯ ಸಂಕೇತ ವಾಗಿದ್ದು, ಸಂವಿಧಾನಕ್ಕೆ ಪೂರಕ ವಾಗಿದೆ. ಪಾಕಿಸ್ತಾನವನ್ನು ವಿರೋಧಿಸು ವದೇ ನಿಜವಾದ ರಾಷ್ಟ್ರೀಯತೆ ಎಂದು ಬಿಜೆಪಿಯಿಂದ ಬಿಂಬಿಸಲಾಗುತ್ತಿದೆ ಎಂದ ಅವರು, ಇಂತಹ ಶಕ್ತಿಗಳ ವಿರುದ್ಧ ಸೈದ್ಧಾಂತಿಕ ಸಂಘರ್ಷಕ್ಕೆ ಕಾಂಗ್ರೆಸ್ ಮುಂದಾಗಬೇಕಿದೆ ಎಂದರು. ‘364 ದಿನ ನಾವು ಪಕ್ಷ ಸಂಘಟನೆ ಮಾಡೋದು;365ನೇ ದಿನ ಯಾರೋ ಬಂದು ಟಿಕೇಟ್ ಕೇಳೋದು; ಇದು ಸರಿಯಾದ ಕ್ರಮ ಅಲ್ಲ ಎಂದು ಶಶಿಧÀರ್ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ದಿಲ್ಲಿಯಿಂದ ಹಳ್ಳಿಯವರೆಗೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಮೋದಿ ಸರ್ಕಾರದಿಂದ ಜನರಿಗೆ ಯಾವದೇ ಪ್ರಯೋಜನವಾಗಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡಿದ್ದು, ಇವುಗಳ ಆಧಾರದ ಮೇಲೆ ಪಕ್ಷವನ್ನು ಸಂಘಟಿಸಬೇಕಿದೆ ಎಂದರು.
ಚುನಾವಣೆಗೆ ಕೆಲ ತಿಂಗಳುಗಳು ಇರುವಾಗ ಬೆಂಗಳೂರಿನಿಂದ ಬರುವ ನಾಯಕರು ನಮಗೆ ಟಿಕೇಟ್ ಬೇಕೆಂದು ಒತ್ತಡ ಹಾಕ್ತಾರೆ;ನಾವು ಐದು ವರ್ಷ ಪಕ್ಷ ಸಂಘಟಿಸಿದ್ದಕ್ಕೆ ಬೆಲೆ ಇಲ್ಲವಾಗುತ್ತದೆ. ಟಿಕೇಟ್ ಆಕಾಂಕ್ಷೆ ಇದ್ದರೆ ಈಗಿಂದೀಗಲೇ ಬಂದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ; ಕೊನೆ ಕ್ಷಣದಲ್ಲಿ ಬಂದು ವೃಥಾ ಗೊಂದಲ ಸೃಷ್ಟಿಸಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡುವದು ಬೇಡ; ಈ ಬಾರಿ ಅಂತಹ ವಿದ್ಯಮಾನಕ್ಕೆ ಅವಕಾಶ ಕೊಡುವದಿಲ್ಲ ಎಂದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಪ.ಪಂ. ಸದಸ್ಯರಾದ ಶೀಲಾ ಡಿಸೋಜ, ಉದಯಶಂಕರ್, ವೆಂಕಟೇಶ್, ತಾ.ಪಂ. ಸದಸ್ಯ ಸತೀಶ್, ಪ್ರಮುಖರಾದ ಹೆಚ್.ಸಿ. ನಾಗೇಶ್, ಜಯೇಂದ್ರ, ನಂದಕುಮಾರ್, ಆದಂ ಸೇರಿದಂತೆ ಇತರರು ಉಪಸ್ಥಿತರಿದ್ದರು.