ಮಡಿಕೇರಿ, ಆ. 28: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಅವಧಿಯಲ್ಲಿ ಮುಂಗಾರು ಕೃಷಿ ಶೇ. 65 ರಷ್ಟು ಸಾಧನೆಯೊಂದಿಗೆ; ಜಿಲ್ಲೆಯಲ್ಲಿ ಭತ್ತದ ನಾಟಿ ಕೆಲಸ ಪೂರ್ಣಗೊಂಡಿದೆ. ಒಟ್ಟು 30,500 ಹೆಕ್ಟೇರ್ ಪ್ರದೇಶದ ಪೈಕಿ ಇದುವರೆಗೆ ಕೇವಲ 18,283 ರಷ್ಟು ಹೆಕ್ಟೇರ್ ಗುರಿ ಮುಟ್ಟಲಾಗಿದೆ.ಈ ಪೈಕಿ ಮಡಿಕೇರಿ ತಾಲೂಕಿನಲ್ಲಿ 6,500 ಹೆಕ್ಟೇರ್ ಭತ್ತದ ಗದ್ದೆಗಳಲ್ಲಿ 4,245 ಹೆಕ್ಟೇರ್ ಕೃಷಿ ಮಾಡಲಾಗಿದೆ. ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ 10,000 ಹೆಕ್ಟೇರ್ ಭತ್ತದ ನಾಟಿ ಪೈಕಿ 9,242 ಹೆಕ್ಟೇರ್ ಕೃಷಿ ಪೂರ್ಣಗೊಂಡಿದ್ದು; ಈ ತಾಲೂಕಿನಲ್ಲಿ 4,000 ಹೆಕ್ಟೇರ್ ಜೋಳದ ಪೈಕಿ 3101 ಹೆಕ್ಟೇರ್‍ನಷ್ಟು ಬಿತ್ತನೆ ಪ್ರಗತಿ ಗೋಚರಿಸಿದೆ.

ಅಂತೆಯೇ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 14,000 ಹೆಕ್ಟೇರ್ ಭತ್ತ ನಾಟಿಯ ಗುರಿ ನಿರೀಕ್ಷಿಸಲಾಗಿದ್ದು; ಪ್ರಸಕ್ತ 6596 ಹೆಕ್ಟೇರ್ ನಾಟಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು ನಿರೀಕ್ಷೆಯಂತೆ ಪ್ರಗತಿ ಗೋಚರಿಸದಿದ್ದರೂ. ಬಹಳಷ್ಟು ಕಡೆಗಳಲ್ಲಿ ಮುಂಗಾರು ಮಳೆಯ ವ್ಯತ್ಯಾಸದಿಂದ ಕೃಷಿ ಕಾರ್ಯದಲ್ಲಿ ಹಿನ್ನೆಡೆಯೊಂದಿಗೆ; ಮಳೆ ಪ್ರವಾಹವೂ ರೈತರ ಕಾಯಕಕ್ಕೆ ಅಡ್ಡಿ ಉಂಟು ಮಾಡಿದೆ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳ ಕೆಲವೆಡೆ ಮರು ನಾಟಿಗೆ ಸಿದ್ಧತೆಯಲ್ಲಿ ರೈತರು ತೊಡಗಿರುವರೆಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.ಮಳೆ ವಿವರ : ಕೊಡಗು ಜಿಲ್ಲೆಯಲ್ಲಿ ಈ ಸಾಲಿನಲ್ಲಿ ವರ್ಷಾರಂಭದಿಂದ ಇದುವರೆಗೆ ಸರಾಸರಿ 85 ಇಂಚು ಮಳೆ ದಾಖಲಾಗಿದೆ. ವಾಡಿಕೆಯಂತೆ 93.07 ಇಂಚು ಮಳೆಯಾಗಬೇಕಿತ್ತು. ಕಳೆದ ವರ್ಷ ಈ ಅವಧಿಗೆ ಅತ್ಯಧಿಕ 134.36 ಇಂಚು ದಾಖಲಾಗಿತ್ತು.

ಪ್ರಸಕ್ತ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 111.57 ಇಂಚು ದಾಖಲಾಗಿದ್ದು; ಕಳೆದ ವರ್ಷ ಇದೇ ವೇಳೆಗೆ 210.46 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಈ ವರ್ಷದಲ್ಲಿ 85.84 ಇಂಚು ದಾಖಲಾಗಿದ್ದು; ಕಳೆದ ವರ್ಷ 111.25 ಇಂಚು ದಾಖಲಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷಾರಂಭದಿಂದ ಈತನಕ ಕೇವಲ 54.82 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ 117.04 ಇಂಚು ದಾಖಲಾಗಿತ್ತು. ಈ ತಾಲೂಕಿನಲ್ಲಿ ಮಳೆಯ ಕ್ಷೀಣತೆಗೆ ನಿದರ್ಶನವೆಂಬಂತೆ; ಹಾರಂಗಿ ಜಲಾಶಯಕ್ಕೆ 1690 ಕ್ಯೂಸೆಕ್ಸ್ ನೀರಿನ ಒಳ ಹರಿವು ಗೋಚರಿಸಿದೆ. ಹಿಂದಿನ ವರ್ಷ ಮುಂಗಾರುವಿನಲ್ಲಿ ಈ ಅವಧಿಗೆ 6391 ಕ್ಯೂಸೆಕ್ಸ್ ಕಂಡು ಬಂದಿತ್ತು. ಈಗಿನ ಮಟ್ಟಿಗೆ 4701 ಕ್ಯೂಸೆಕ್ಸ್ ನೀರಿನ ಕ್ಷೀಣತೆ ಗೋಚರಿಸಿದೆ.