ಮಡಿಕೇರಿ, ಆ.28: ಗುರುವಾರ (ಇಂದು) ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಲಿದ್ದಾರೆ. ಅವರು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದರ್ಶನದ ಬಳಿಕ ಕೆ.ಆರ್.ಎಸ್.ನಲ್ಲಿ ಶ್ರೀ ಕಾವೇರಿ ಮಾತೆಯ ಪೂಜೆ ಹಾಗೂ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಮಧ್ಯಾಹ್ನ 1.45 ಕ್ಕೆ ಕೆ.ಆರ್ ಸಾಗರದ ಕೆ.ಆರ್. ಎಸ್ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್‍ನಲ್ಲಿ ಮ. 2.15 ಕ್ಕೆ ಇಳಿಯಲಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ರಾಜ್ಯ ಕಂದಾಯ ಸಚಿವರಾದ ಆರ್.ಅಶೋಕ್ ಅವರೂ ಆಗಮಿಸಲಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ರಾಮನಗರದಿಂದ ರಸ್ತೆ ಮಾರ್ಗವಾಗಿ ಮಧ್ಯಾಹ್ನ 1.30 ಕ್ಕೆ ಕುಶಾಲನಗರ ತಲುಪಲಿದ್ದು ಮುಖ್ಯಮಂತ್ರಿಯವರು ಬಂದಾಗ ಅವರೊಂದಿಗೆ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕೂಡಿಗೆಯಲ್ಲಿ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರು ಜಿಲ್ಲೆಯ ಶಾಸಕರು, ಸಂಸದರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು “ಶಕ್ತಿ ಸಂಪರ್ಕಿಸಿದಾಗ ಅವರು ವಿವರ ಮಾಹಿತಿಯಿತ್ತರು.ಮುಖ್ಯಮಂತ್ರಿಯವರಿಗೆ ವಿದ್ಯುನ್ಮಾನ ಪ್ರಾತ್ಯಕ್ಷಿಕೆಯ ಮೂಲಕ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹ, ಭೂ ಕುಸಿತದಿಂದ ಸಂಭವಿಸಿರುವ ಹಾನಿ ಕುರಿತು ಪ್ರದರ್ಶಿಸಲಾಗುವದು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ರೂ. 620 ಕೋಟಿ ನಷ್ಟ ಸಂಭವಿಸಿದ್ದು ಆ ಕುರಿತು ಗಮನಕ್ಕೆ ತರಲಾಗುವದು ಎಂದು ತಿಳಿಸಿದರು.

ಕೂಡಿಗೆಯಲ್ಲಿ ಸಭೆÉ ಬಳಿಕ ಮುಖ್ಯಮಂತ್ರಿಯವರು ರಸ್ತೆ ಮಾರ್ಗದ ಮೂಲಕ ನೆಲ್ಲಿ ಹುದಿಕೇರಿ ಮತ್ತು ಕರಡಿಗೋಡು ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಸಮಯಾವಕಾಶ ಕಡಿಮೆಯಿರುವದರಿಂದ ಉಳಿದ ಎಲ್ಲ ಹಾನಿ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದು ಎಂದರು.

ಕಳೆದ ವರ್ಷದ ಸಂತ್ರಸ್ತರಿಗೆ ಇನ್ನೂ ಮನೆ ವಿತರಣೆಯಾಗದ ಕುರಿತು ಕೇಳಿದಾಗ ಈಗಾಗಲೇ 150 ಮನೆಗಳು ಪೂರ್ಣ ಸಿದ್ಧಗೊಂಡಿವೆ. ಮುಖ್ಯಮಂತ್ರಿಯವರೇ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲು ಮುಂದೆ ದಿನಾಂಕ ನಿಗದಿಪಡಿಸಲು ಅವರನ್ನು ಕೋರಲಾಗುವದು ಎಂದು ಜಿಲ್ಲಾಧಿಕಾರಿ ಮಾಹಿತಿಯಿತ್ತರು.