ವೀರಾಜಪೇಟೆ, ಆ. 27: ವೀರಾಜಪೇಟೆ ಪಟ್ಟಣದಲ್ಲಿ ವ್ಯವಸ್ಥಿತವಾಗಿ ನಾಲ್ಕೂವರೆ ದಶಕಗಳಿಗೂ ಅಧಿಕವಾಗಿ ಆಚರಿಸಿಕೊಂಡು ಬರುತ್ತಿರುವ ಗೌರಿ ಗಣೇಶ ಉತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಪಟ್ಟಣ ವ್ಯಾಪ್ತಿಯಲ್ಲಿ ಇಪ್ಪತ್ತೊಂದು ಕಡೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳವರೆಗೆ ಅಪರಾಹ್ನ ಹಾಗೂ ರಾತ್ರಿ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿ ಹನ್ನೊಂದನೇ ದಿನಕ್ಕೆ ಉತ್ಸವ ಮೂರ್ತಿಗಳ ವಿಸರ್ಜನೆಗೆ ಸಮಿತಿಗಳು ತಯಾರಿ ನಡೆಸಿವೆ.ಈ ವರ್ಷ ದಕ್ಷಿಣ ಕೊಡಗಿನ ತೋರ ಗ್ರಾಮ, ಇಲ್ಲಿನ ಮಲೆತಿರಿಕೆಬೆಟ್ಟ, ನೆಹರೂನಗರ ಹಾಗೂ ಅರಸುನಗರದ ಸಾಕಷ್ಟು ಮಂದಿಯ ಮನೆಗಳು ಸೇರಿದಂತೆ ವಿವಿಧೆಡೆಗಳಲ್ಲಿ ಭಾರೀ ಮಳೆಯಿಂದ ಜಲಪ್ರಳಯ ಉಂಟಾಗಿ ಅನೇಕ ಮಂದಿ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡ ಹಿನ್ನೆಲೆಯಲ್ಲಿ ಗೌರಿಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ಉತ್ಸವ ಸಮಿತಿಗಳು ತೀರ್ಮಾನಿಸಿವೆ.ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಸ್ಥಾನ ಹಾಗೂ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಪೂರ್ವಿಕರು ಸಾಮೂಹಿಕವಾಗಿ ಸೇರಿ ಗೌರಿ ಗಣೇಶೋತ್ಸವವನ್ನು ಆಚರಿಸುತ್ತಿದ್ದರೆಂಬ ದಾಖಲೆಗಳಿವೆ. 1980ರಿಂದ ಇಲ್ಲಿಯ ತನಕ ಈ ಎರಡು ಉತ್ಸವ ಸಮಿತಿಯೊಂದಿಗೆ 19 ಉತ್ಸವ ಸಮಿತಿಗಳು ಸೇರಿಕೊಂಡು ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ 1987 ರಲ್ಲಿ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆಯ ದಿನದಂದು ರಾತ್ರಿ ಇಲ್ಲಿನ ಗಡಿಯಾರ ಕಂಬದ ಬಳಿಯಲ್ಲಿ ಜನ ಜಂಗುಳಿಯ ಮಧ್ಯೆ ನಾಡ ಬಾಂಬ್ ಬಿದ್ದು ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಒಬ್ಬ ಬಾಲಕಿ, ಒಬ್ಬ ಮಹಿಳೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ನಂತರ ಎರಡು ವರ್ಷಗಳವರೆಗೆ ವೀರಾಜಪೇಟೆ ಗೌರಿ ಗಣೇಶೋತ್ಸವ ಆಚರಣೆ ಕಳೆಗುಂದಿತ್ತು. ಆನಂತರ ಈ ಬಾಂಬ್ ಪ್ರಕರಣ ಜನರಲ್ಲಿ ಮರೆಯಾಗುತ್ತಾ ನಂತರದ ವರ್ಷಗಳಲ್ಲಿ ವಿವಿಧ ಕಡೆಗಳ ಉತ್ಸವ ಸಮಿತಿಗಳು ಸೇರಿ
(ಮೊದಲ ಪುಟದಿಂದ) ಉತ್ಸವ ಆಚರಿಸುತ್ತಾ ಬಂದಿವೆ. ಕಳೆದ ವರ್ಷ ಇಪ್ಪತ್ತೊಂದು ಉತ್ಸವ ಸಮಿತಿಗಳು ಹನ್ನೊಂದು ದಿನಗಳ ತನಕ ಉತ್ಸವವನ್ನು ಆಚರಿಸಿದ್ದವು.
ಈ ಬಾರಿ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಸ್ಥಾನದ ಗಣಪತಿ ಸೇವಾ ಟ್ರಸ್ಟ್, ಜೈನರಬೀದಿಯ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರಬೀದಿಯ
ಅಂಗಾಳಪರಮೇಶ್ವರಿ ದೇವಸ್ಥಾನದ ವಿನಾಯಕ ಯುವಕ ಭಕ್ತ ಮಂಡಳಿ, ದಖ್ಖನಿಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ನೆಹರೂ ನಗರದ ನೇತಾಜಿ ಉತ್ಸವ ಸಮಿತಿ, ಪಂಜರಪೇಟೆ ಗಣಪತಿಬೀದಿಯ ಮಹಾಗಣಪತಿ ಸೇವಾ ಸಂಘ, ಪಂಜರ್ಪೇಟೆಯ ವಿನಾಯಕ ಸೇವಾ ಸಮಿತಿ, ಇಲ್ಲಿನ ಚಿಕ್ಕಪೇಟೆಯ ಆಂಜನೇಯ ದೇವಸ್ಥಾನದ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ವಿಘ್ನೇಶ್ವರ ಉತ್ಸವ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆಬೆಟ್ಟದ ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ, ಸುಣ್ಣದ ಬೀದಿ ಹರಿಕೇರಿಯ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ, ಇಲ್ಲಿನ ಮೀನುಪೇಟೆಯ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಗೌರಿಕೆರೆಯ ಗಣಪತಿ ಸೇವಾ ಸಮಿತಿ, ಅಯ್ಯಪ್ಪಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯಸ್ವಾಮಿ ರಸ್ತೆಯ ಬಾ¯ಂಜನೇಯ ವಿನಾಯಕ ಉತ್ಸವ ಸಮಿತಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪೌರ ನೌಕರರ ಸೇವಾ ಸಂಘದ ಗಣಪತಿ ಸೇವಾ ಸಮಿತಿ ಸೇರಿದಂತೆ 21 ಉತ್ಸವ ಸಮಿತಿಗಳು ಹನ್ನೊಂದು ದಿನಗಳ ಉತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲಿವೆ.
ಗೌರಿಗಣೇಶೋತ್ಸವದ ಆಚರಣೆ ಪ್ರಯುಕ್ತ ಈಗಾಗಲೇ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ನಡೆಸಲಾಗಿದೆ. ಜೊತೆಗೆ ವೀರರಾಜೇಂದ್ರಪೇಟೆ ಗೌರಿಗಣೇಶ ನಾಡಹಬ್ಬದ ಒಕ್ಕೂಟವೂ ಎಲ್ಲಾ ಉತ್ಸವ ಸಮಿತಿಗಳನ್ನು ಸೇರಿಸಿ ಪೂರ್ವಭಾವಿ ಸಭೆಯನ್ನು ನಡೆಸಿದೆ.
ಸೆ. 1 ರಂದು ಗೌರಿಪಲ್ಲಕ್ಕಿ ಉತ್ಸವ ತಾ. 2 ರಂದು ಗಣೇಶನ ಪ್ರತಿಷ್ಠಾಪನೆ ಸೇರಿದಂತೆ ಗೌರಿ ಗಣೇಶೋತ್ಸವವು ತಾ. 12ರ ವರೆಗೆ ನಡೆಯಲಿದೆ.