ಮಡಿಕೇರಿ, ಆ. 27: ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಪಾಜೆಯ ಯುವ ಮುಖಂಡ ಬಾಲಚಂದ್ರ ಕಳಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಂಧಿತರಾಗಿದ್ದ ಮೂವರು ಆರೋಪಿಗಳ ಪೈಕಿ ಪ್ರಮುಖ ಆರೋಪಿತನಾಗಿದ್ದ ಹರಿಪ್ರಸಾದ್ ಎಂಬಾತನಿಗೆ ರಾಜ್ಯ ಉಚ್ಛನ್ಯಾಯಾಲ ಯದಿಂದ ಜಾಮೀನು ದೊರೆತಿದೆ.ಕಳೆದ ಮಾರ್ಚ್ 19 ರಂದು ತಾಳತ್ಮನೆ ಮಾರ್ಗದಲ್ಲಿ ಸಂಜೆಗತ್ತಲಲ್ಲಿ ಕಳಗಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಆದರೆ ಇದೊಂದು ನಿಗೂಢ ರೀತಿಯ ಪೂರ್ವ ನಿಯೋಜಿತ ಕೊಲೆ ಎಂಬದು ಬಳಿಕ ಬಹಿರಂಗಗೊಂಡು ಮಾರ್ಚ್ 29 ರಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಪ್ರಥಮ ವರ್ತಮಾನ ವರದಿಯಲ್ಲಿ ಅವಘಡ ಎಂದಿದ್ದ ಪ್ರಕರಣ ತಿರುವು ಪಡೆದು ನಂತರ ಇದು ಪೂರ್ವ ನಿಯೋಜಿತ ಕೊಲೆ ಎಂದು ಪೊಲೀಸರ ತನಿಖೆಯಿಂದ ಸಾಬೀತಾಗಿ ಸಂಪಾಜೆಯ ಕೆ. ಹರಿಪ್ರಸಾದ್, ಚೆಂಬುವಿನ ಸಂಪತ್ಕುಮಾರ್ ಹಾಗೂ ಲಾರಿಚಾಲಕ ಜಯನ್ (ಜಗ್ಗು) ಎಂಬವರ (ಮೊದಲ ಪುಟದಿಂದ) ವಿರುದ್ಧ ಪ್ರಕರಣ ದಾಖಲಾಗಿ ಬಂಧಿತರಾಗಿದ್ದರು.ಈ ಬಗ್ಗೆ ಆರೋಪಿ ಹರಿಪ್ರಸಾದ್ಗೆ ಇಂದು ರಾಜ್ಯ ಉಚ್ಛನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಕೋರ್ಟ್ ಹಾಲ್ ಸಂಖ್ಯೆ 8ರಲ್ಲಿ ನಡೆದ ವಿಚಾರಣೆಯಲ್ಲಿ ಜಸ್ಟೀಸ್ ಪಣೀಂದ್ರ ಅವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಈತನ ಪರ ವಕೀಲರಾದ ಕೊಡಗಿನವರಾದ ಟಿ.ಎ. ಕರುಂಬಯ್ಯ ಹಾಗೂ ಪಿ.ಸಿ. ವಿನಿತಾ ವಾದ ಮಂಡಿಸಿದ್ದರು. ಈ ಪ್ರಕರಣ ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದನ್ನು ಸ್ಮರಿಸಬಹುದು.