ಸೋಮವಾರಪೇಟೆ, ಆ. 27: ತಾಲೂಕಿನ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಬೆಟ್ಟಗುಡ್ಡಗಳಿಂದ ನೀರು ಇಳಿಯುತ್ತಲೇ ಇದೆ.
ಸೋಮವಾರಪೇಟೆಯ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕೋಟೆಬೆಟ್ಟದ ತಟದಲ್ಲಿರುವ ರೈತಾಪಿ ವರ್ಗ ಪ್ರಸಕ್ತ ಸಾಲಿನ ಮಳೆಗೆ ಅತೀ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಫಸಲು ನಷ್ಟವಾಗುತ್ತಿದೆ.
ಈ ಭಾಗದಲ್ಲಿ ಕಾಫಿಯಂತೂ ಕೊಳೆರೋಗಕ್ಕೆ ತುತ್ತಾಗಿ ನೆಲಕ್ಕಚ್ಚಿದ್ದರೆ, ಗದ್ದೆಗಳಿಗೆ ತೋಡಿನ ನೀರು ಹರಿದು ನಾಟಿ ಮಾಡಿರುವ ಪೈರು ಕೊಳೆಯಲಾರಂಭಿಸಿವೆ. ಕೋಟೆಬೆಟ್ಟದ ತಟದಲ್ಲಿರುವ ಹೊಳೆ,ಸಣ್ಣಪುಟ್ಟ ತೊರೆಗಳು ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ತೋಡಿನ ಕಟ್ಟೆ ಒಡೆದು ಗದ್ದೆಗಳಿಗೆ ನೀರು ನುಗ್ಗುತ್ತಿದೆ. ಬೆಟ್ಟಶ್ರೇಣಿ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ಬೆಟ್ಟದಿಂದ ನೀರು ಇಳಿಯುತ್ತಲೇ ಇದೆ. ಕಳೆದ 15 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ತೋಡಿನಲ್ಲಿ ನೀರಿನ ಹರಿವು ಹೆಚ್ಚಾಗಿ, ಕಟ್ಟೆ ಒಡೆದ ಪರಿಣಾಮ ಬೆಟ್ಟದ ತಳಭಾಗದಲ್ಲಿರುವ ತಂಬುಕುತ್ತಿರ ಸುಬ್ಬಯ್ಯ ಅವರಿಗೆ ಸೇರಿದ ಗದ್ದೆಗೆ ನೀರು ನುಗ್ಗಿದ್ದು, ಕಟ್ಟೆಯನ್ನು ಮರುನಿರ್ಮಾಣ ಮಾಡದ ಹಿನ್ನೆಲೆ ನಾಟಿ ಮಾಡಿದ್ದ ಗದ್ದೆಯಲ್ಲೇ ಇಂದಿಗೂ ನೀರು ಹರಿಯುತ್ತಿದೆ.
ಪರಿಣಾಮ ಸುಬ್ಬಯ್ಯ ಅವರು ನಾಟಿ ಮಾಡಿದ್ದ ಪೈರು ಕೊಳೆಯಲಾರಂಭಿಸಿದ್ದು, ನಷ್ಟ ಅನುಭವಿಸುವಂತಾಗಿದೆ. ಇದರೊಂದಿಗೆ ಕಳೆದ ಸಾಲಿನಲ್ಲಿ ಭೂ ಕುಸಿತದಿಂದ ಮಣ್ಣು ಜರುಗಿ ಹೊಳೆಗೆ ತುಂಬಿದ್ದರಿಂದ, ಹೊಳೆಯಲ್ಲಿನ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ಇದೀಗ ತೋಡಿನ ಕಟ್ಟೆ ಒಡೆದು ಗದ್ದೆ ಸಂಪೂರ್ಣವಾಗಿ ನಷ್ಟ ವಾಗಿದೆ. ನಷ್ಟ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅರ್ಜಿ ಕೊಡಬೇಕಿದೆ. ಇದರೊಂದಿಗೆ ಕಟ್ಟೆಯನ್ನು ಮರುನಿರ್ಮಾಣ ಮಾಡಲು ಗರ್ವಾಲೆ ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತೇನೆ ಎಂದು ತಂಬುಕುತ್ತಿರ ಸುಬ್ಬಯ್ಯ ತಿಳಿಸಿದ್ದಾರೆ.