ಕೂಡಿಗೆ, ಆ. 27: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವದು ಮತ್ತು ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದುಂಟಾಗಿರುವ ಹಾನಿಗಳ ಕುರಿತು ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ಉದ್ದೇಶದಿಂದ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಸರ್ಕಾರದ ಅಧ್ಯಯನ ತಂಡವು ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿತ್ತು.ಕೊಡಗು ಜಿಲ್ಲೆಯ ಕೂಡಿಗೆ ಸೈನಿಕ ಶಾಲೆಯ ಆವರಣಕ್ಕೆ ಎರಡು ಹೆಲಿಕ್ಯಾಪ್ಟರ್‍ಗಳ ಮೂಲಕ ಆಗಮಿಸಿದ ಅಧಿಕಾರಿಗಳ ತಂಡವು ಸೈನಿಕ ಶಾಲೆಯ ಸಭಾಂಗಣದಲ್ಲಿ ಸಭೆ ನಡೆಸಿತು. ಸಭೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗು ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿಗಳ (ಮೊದಲ ಪುಟದಿಂದ) ಬಗ್ಗೆ ಕಂಪ್ಯೂಟರ್ ಪ್ರೊಜೆಕ್ಟರ್‍ನ ಮೂಲಕ ಮಾಹಿತಿ ನೀಡಿದರು.2019-20ನೇ ಸಾಲಿನಲ್ಲಿ ಆದ 2043.58 ಎಂ.ಎಂ ಹೆಚ್ಚು ಮಳೆಯಿಂದಾಗಿ ಜಿಲ್ಲೆಯ ಮೂರು ತಾಲೂಕುಗಳ, 11 ಹೋಬಳಿ ವ್ಯಾಪ್ತಿಯ 54 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಾನಿಯಾಗಿದೆ. ಪ್ರವಾಹದ ಸಂದರ್ಭ 14 ಜನರು ಮೃತರಾಗಿದ್ದು, 60 ಜಾನುವಾರುಗಳು ಮೃತಪಟ್ಟಿದೆ. ಪ್ರವಾಹದ ಸಂದರ್ಭ ವೀರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ 4 ಜನರು ಕಾಣೆಯಾಗಿದ್ದು, ಪೊಲೀಸ್ ಇಲಾಖೆ, ಗರುಡಾ ಪೋರ್ಸ್, ಎನ್‍ಡಿಆರ್‍ಎಫ್ ತಂಡಗಳು ಕಾರ್ಯಾಚರಣೆ ನಡೆಸಿವೆ. ಮಡಿಕೇರಿ ತಾಲೂಕಿನಲ್ಲಿ 451 ಮನೆಗಳಿಗೆ ಹಾನಿಯಾಗಿದ್ದು, 383.50 ಲಕ್ಷ ನಷ್ಟವಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 993 ಮನೆಗಳು ಹಾನಿಯಾಗಿದ್ದು, 367.67 ನಷ್ಟ, ವೀರಾಜಪೇಟೆ ತಾಲೂಕಿನಲ್ಲಿ 897 ಮನೆಗಳು ಹಾನಿಯಾಗಿದ್ದು, 688.26 ಲಕ್ಷ ರೂ ನಷ್ಟ ಉಂಟಾಗಿದ್ದು, ಒಟ್ಟಾರೆ ಕೊಡಗಿನಲ್ಲಿ 2341 ಮನೆಗಳು ಹಾನಿಯಾದ ಪರಿಣಾಮ 1439.45 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಮೂಲಸೌಕರ್ಯಗಳ ಹಾನಿ ಬಗ್ಗೆ ವಿವರಿಸಿದರು. ಲೋಕೋಪಯೋಗಿ ಇಲಾಖೆಯ 81 ಕಾಮಗಾರಿಗಳು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಆದ ರಸ್ತೆಗಳು, ಅಂಗನವಾಡಿ ಕಟ್ಟಡಗಳು, ಶಾಲೆ ಕಟ್ಟಡಗಳು, ಆಸ್ಪತ್ರೆ ಕಟ್ಟಡಗಳು ಒಟ್ಟು 1043 ಕಾಮಗಾರಿ ಹಾನಿಯಾಗಿದ್ದು, ಗ್ರಾಮಾಂತರ ನೀರು ಸರಬರಾಜಿನ 131, ಸಣ್ಣ ನೀರಾವರಿಯ 27, ಚೆಸ್ಕಾಂನ 1467, ನಗರ ಇಲಾಖೆಯ 223, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ 15, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 32, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 1, ಪ್ರಮುಖ ನೀರಾವರಿಯ 71 ಕಾಮಗಾರಿಗಳು ಹಾನಿಯಾಗಿ, ಅಂದಾಜು 33301.76 ಲಕ್ಷ ನಷ್ಟವಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡಿದರು.

ಸಂತ್ರಸ್ತರಿಗೆ ತಕ್ಷಣದ ಪುನರ್ವಸತಿ ಕಾರ್ಯಗಳಿಗಾಗಿ ವಿವಿಧ ಅನುಷ್ಠಾನದ ಏಜೆನ್ಸಿಗಳಿಗೆ 2.92 ಕೋಟಿ ಬಿಡಗಡೆ ಮಾಡಲಾಗಿದೆ. 4146 ಸಂತ್ರಸ್ತರ ಕುಟುಂಬಗಳಿಗೆ ತಲಾ 10,000 ದಂತೆ ಪರಿಹಾರ ನೀಡಲಾಗಿದೆ. ಪ್ರವಾಹದಲ್ಲಿ ಮೃತರಾದ 11 ಜನರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ.

ಹಾಗೂ ಸಂತ್ರಸ್ತರಿಗೆ ಆಹಾರ ಕಿಟ್, ಬೇಸಿಕ್ ಮೆಡಿಕಲ್ ಕಿಟ್ ಮತ್ತಿತರ ದಿನಬಳಕೆಯ ವಸ್ತುಗಳ ಕಿಟ್‍ಗಳನ್ನು ವಿತರಿಸಲಾಗಿದೆ ಹಾಗೂ ಮನೆ ಹಾನಿಯಾಗಿರುವವರಿಗೆ ಪರಿಹಾರವನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೇಂದ್ರ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಅಧಿಕಾರಿಗಳ 6 ಜನರ ತಂಡದಲ್ಲಿ ಸರ್ಕಾರದ ಆರ್ಥಿಕ ಮತ್ತು ವಿತ್ತ ಇಲಾಖೆಯ ಎಫ್‍ಸಿಡಿ ನಿರ್ದೇಶಕರಾದ ಎನ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪುನ್ನುಸ್ವಾಮಿ, ಬೆಂಗಳೂರು ಕೇಂದ್ರ ಸರ್ಕಾರದ ಜಲಮೂಲ ಪ್ರಾದೇಶಿಕ ಕಚೇರಿಯ ಜಿತೇಂದ್ರ ಪಣ್ವಾರ್, ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಪ್ರಾದೇಶಿಕ ಕಛೇರಿಯ ವಿಜಯ್ ಕುಮಾರ್, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಣಿಕ್ ಚಂದ್ರ ಪಂಡಿತ್ ಹಾಗೂ ನವದೆಹಲಿಯ ಸರ್ಕಾರದ ಇಂಧನ ಇಲಾಖೆಯ ಒ.ಪಿ.ಸುಮನ್ ಇದ್ದರು.

ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಣ್ಣೇಕರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಮ್ಮಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ, ಜಿ.ಪಂ ಅಭಿಯಂತರ ಪ್ರಭು, ತಹಶೀಲ್ದಾರ್ ಗೋವಿಂದರಾಜ್ ಸೇರಿದಂತೆ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಪಶುಪಾನಾ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಇದ್ದರು. ನಂತರ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು, ಜಿಲ್ಲೆಯ ಅಧಿಕಾರಿಗಳೊಂದಿಗೆ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ, ವೀಕ್ಷಿಸಿದರು. - ನಾಗರಾಜ ಶೆಟ್ಟಿ ವೀರಾಜಪೇಟೆ, ಆ. 27: ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಯ ಕೇಂದ್ರ ಅಧ್ಯಯನ ತಂಡ ಅತಿವೃಷ್ಟಿಯಿಂದ ಈ ಬಾರಿ ಅನೇಕ ಮನೆಗಳು, ರಸ್ತೆ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಖುದ್ದು ಭೇಟಿ ನೀಡಿದ ಸ್ಥಳಗಳನ್ನು ಗಣನೆಗೆ ತೆಗೆದುಕೊಂಡು ಕೂಲಂಕುಶವಾಗಿ ವರದಿ ತಯಾರಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಕೊಡಗಿನಲ್ಲಿ ಈಚೆಗಿನ ಮಳೆಹಾನಿಯ ಕುರಿತು ಪೂರ್ಣಮಾಹಿತಿ ಕಲೆ ಹಾಕಲಾಗಿದೆ ಎಂದು ಭಾರತ ಸರಕಾರದ ಆರ್ಥಿಕ ಇಲಾಖೆಯ ನಿರ್ದೇಶಕ ಹಾಗೂ ಅಧ್ಯಯನ ತಂಡದ ಮುಖ್ಯಸ್ಥ ಎಸ್.ಸಿ. ಮೀನಾ ಹೇಳಿದರು.

ದಕ್ಷಿಣ ಕೊಡಗಿನ ಪ್ರಕೃತಿ ವಿಕೋಪದ ಸ್ಥಳಗಳಾದ ನೆಲ್ಯಹುದಿಕೇರಿ, ಕರಡಿಗೋಡು ಕಾವೇರಿ ನದಿತೀರಕ್ಕೆ ಇಂದು ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡ ಇಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿವಿಧ

(ಮೊದಲ ಪುಟದಿಂದ) ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.

ಕೇಂದ್ರ ಅಧ್ಯಯನ ತಂಡದೊಂದಿಗೆ ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪೊನ್ನು ಸ್ವಾಮಿ, ಕೇಂದ್ರದ ಜಲ ಸಂಪನ್ಮೂಲ ಪ್ರಾದೇಶಿಕ ಕಚೇರಿಯ ಎಸ್.ಇ. ಜಿತೇಂದ್ರ ಪನ್ವಾರ್, ರಸ್ತೆ ಮತ್ತು ಹೆದ್ದಾರಿ ವಿಭಾಗದ ವಿಜಯಕುಮಾರ್ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಣಿಕ್ ಚಂದ್ರ, ಇಂಧನ ಇಲಾಖೆಯ ಓ.ಪಿ.ಸುಮನ್ ಹಾಜರಿದ್ದರು.

ಕೇಂದ್ರ ಅಧ್ಯಯನ ತಂಡದೊಂದಿಗೆ ಕೊಡಗಿನ ಜಿಲ್ಲಾಧಿಕಾರಿ ಅನಿಶ್ ಜಾಯ್ ಕಣ್ಮಣಿ, ಜಿಲ್ಲಾ ಪಂಚಾಯಿತ್‍ನ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ವಿವಿಧ ಇಲಾಖೆಯ ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಅಧ್ಯಯನ ತಂಡದ ವೇಳಾಪಟ್ಟಿಯಂತೆ ಈ ತಂಡ ತೋರ ಗ್ರಾಮದ ಜಲಪ್ರಳಯದ ದುರಂತದ ಜಾಗ ಹಾಗೂ ಮಾಕುಟ್ಟದ ಹೆದ್ದಾರಿ ರಸ್ತೆಯ ದುರಸ್ತಿಗೊಂಡ ಸ್ಥಳಕ್ಕೆ ತೆರಳಬೇಕಾಗಿತ್ತು. ಸಮಯದ ಅಭಾವದ ಕಾರಣ ಕೇಂದ್ರದ ಅಧ್ಯಯನ ತಂಡ ಕುಶಾಲನಗರಕ್ಕೆ ಹಿಂತಿರುಗಿತು.

ಮಾಕುಟ್ಟದ ದುರಸ್ತಿ ರಸ್ತೆ ಹಾಗೂ ತೋರ ಗ್ರಾಮದ ದುರಂತದ ಚಿತ್ರಣವನ್ನು ವೀಡಿಯೋದಲ್ಲಿ ವೀಕ್ಷಿಸಿರುವದಾಗಿ ಕೇಂದ್ರ ಅಧ್ಯಯನ ತಂಡ ತಿಳಿಸಿತು.

ಪ್ರವಾಹ ಪೀಡಿತ ಪ್ರದೇಶಗಳ ಕೇಂದ್ರದ ಅಧ್ಯಯನದ ವೀಕ್ಷಣಾ ತಂಡಕ್ಕೆ ಗೋಣಿಕೊಪ್ಪಲಿನ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಮನು ಸೋಮಯ್ಯ ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಂಡದ ಮುಖ್ಯಸ್ಥ ಎಸ್.ಸಿ.ಮೀನಾ ಅವರಿಗೆ ಕೊಡಗನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕು ಎಂದು ಹತ್ತು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿದರು. - ಡಿಎಂಆರ್ ಸಿದ್ದಾಪುರ, ಆ. 27: ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರದ ಕರಡಿಗೋಡುವಿಗೆ ಮಂಗಳವಾರದಂದು ಕೇಂದ್ರದ ಅಧ್ಯಯನ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲ್ಯಹುದಿಕೇರಿಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯಪಡೆದಿರುವ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಸಭೆಯನ್ನು ಸ್ಥಳೀಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಸಂತ್ರಸ್ತ ಪಿ. ಆರ್. ಭರತ್ ಮಾತನಾಡಿ, ಕಳೆದ 22 ವರ್ಷಗಳಿಂದ ನದಿತೀರದ ನಿವಾಸಿಗಳಿಗೆ ವರ್ಷಂಪ್ರತಿ ಪ್ರವಾಹದ ಸಂದರ್ಭದಲ್ಲಿ ಸಮಸ್ಯೆಗಳು ಉದ್ಭವವಾಗುತ್ತಿದೆ. ಆದರೆ ಈವರೆಗೂ ಸರ್ಕಾರ ಹಾಗೂ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸಿಕೊಡುವಲ್ಲಿ ಸ್ಪಂದಿಸುತ್ತಿಲ್ಲ ಎಂದರು.

(ಮೊದಲ ಪುಟದಿಂದ) ಕೂಡಲೇ ಪೈಸಾರಿ ಜಾಗಗಳನ್ನು ಗುರುತಿಸಿ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಕೇಂದ್ರ ಅಧ್ಯಯನ ತಂಡದ ಗಮನ ಸೆಳೆದರು. ಕಾಫಿ ಬೆಳೆಗಾರ ಹೊಸಮನೆ ವಸಂತಕುಮಾರ್ ಮಾತನಾಡಿ, ಪ್ರವಾಹದಿಂದಾಗಿ ಕಾಫಿ ತೋಟಗಳು, ಕೃಷಿ ಫಸಲುಗಳು ನಾಶವಾಗಿರುತ್ತದೆ. ರೈತರು ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಅಲ್ಲದೇ ಕಳೆದ ಬಾರಿ ಕೂಡ ನಷ್ಟ ಸಂಭವಿಸಿದ ಬೆಳೆಗಾರರಿಗೆ ನಷ್ಟ ಪರಿಹಾರ ಸಿಗಲಿಲ್ಲವೆಂದು ತಿಳಿಸಿದರು. ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಂಗೀತ ಥೋಮಸ್ ಸಂತ್ರಸ್ತೆ ಮಾತನಾಡಿ, ತಾನು ಸೇರಿದಂತೆ ನೂರಾರು ಮಂದಿ ಮನೆ ಕಳೆದುಕೊಂಡು ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಕಳೆದ 15 ದಿನಗಳಿಂದ ಆಶ್ರಯ ಪಡೆದಿದ್ದೇವೆ.

ಪರಿಹಾರ ಕೇಂದ್ರ ಬಿಟ್ಟು ಹೋಗಿ ವಾಸ ಮಾಡಲು ಬಾಡಿಗೆ ಮನೆಗಳು ಕೂಡ ಸಿಗುತ್ತಿಲ್ಲ. ನಮ್ಮ ಜೀವನ ಅತಂತ್ರವಾಗಿದೆ ಎಂದರು. ಶಾಲೆಗಳಿಗೆ ತೆರಳುವ ಮಕ್ಕಳಿಗೂ ಶಾಲೆಗಳಿಗೆ ತೆರಳಲು ಕಷ್ಟವಾಗಿದೆ. ನೆಲ್ಯಹುದಿಕೇರಿ ಗ್ರಾಮದಲ್ಲಿ ಸಾಕಷ್ಟು ಒತ್ತುವರಿ ಜಾಗಗಳಿದ್ದು, ಅವುಗಳನ್ನು ತೆರವುಗೊಳಿಸಿ ಶಾಶ್ವತ ಸೂರು ಒದಗಿಸಿ ಕೊಡುವಂತೆ ಕೇಂದ್ರ ಅಧ್ಯಯನ ಸಮಿತಿಯ ಅಧಿಕಾರಿಗಳ ಬಳಿ ದುಃಖದೊಂದಿಗೆ ಮನವಿ ಮಾಡಿದರು. ಇದನ್ನು ಆಲಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಪ್ರವಾಹದಿಂದಾಗಿ ಕುಸಿದು ನೆಲಸಮಗೊಂಡಿರುವ ಕುಂಬಾರಗುಂಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದಾದ ಬಳಿಕ ಕರಡಿಗೋಡಿನಲ್ಲಿ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಅಧ್ಯಯನ ತಂಡದ ಅಧಿಕಾರಿ ಪ್ರಕಾಶ್ ಈ ಬಾರಿಯ ಪ್ರವಾಹದಿಂದಾಗಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಾನಿಗಳಾಗಿದ್ದು, ಮನೆ - ಮಠಗಳು ಕುಸಿದಿರುತ್ತದೆ. ಅಲ್ಲದೇ ಪ್ರಾಣಹಾನಿಗಳು ಸಂಭವಿಸಿದೆ. ಜಾನುವಾರುಗಳು ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯಂತೆ ಉತ್ತರ ಕರ್ನಾಟಕ ಸೇರಿದಂತೆ ಕೊಡಗು ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇವೆ. ನಮ್ಮ ತಂಡದಲ್ಲಿ 7 ಮಂದಿ ಇದ್ದು, ಕೊಡಗು ಜಿಲ್ಲಾಧಿಕಾರಿಗಳಿಂದ ವರದಿ ಪಡೆದುಕೊಂಡು ನಮ್ಮ ವರದಿಯನ್ನು ಕೇಂದ್ರಕ್ಕೆ ರವಾನಿಸಿ ಅಗತ್ಯ ಕ್ರಮಕೈಗೊಳ್ಳಲಾಗುವದೆಂದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಸಿಇಓ ಲಕ್ಷ್ಮೀಪ್ರಿಯ, ಉಪವಿಭಾಗಾಧಿಕಾರಿ ನಂಜೇಗೌಡ, ತಹಶೀಲ್ದಾರ್ ಗೋವಿಂದರಾಜು, ಪುರಂದರ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. ಕರಡಿಗೋಡಿಗೆ ಭೇಟಿ ನೀಡಿದ ಕೇಂದ್ರ ತಂಡವು ಒಂದು ಮನೆಯನ್ನು ಮಾತ್ರ ಪರಿಶೀಲಿಸಿದ ಬಗ್ಗೆ ಸಂತ್ರಸ್ತರು ಡಿಸಿಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಏನಾದರೂ ಅನಾಹುತ ಆದರೆ ಜಿಲ್ಲಾಡಳಿತ ನೇರ ಹೊಣೆ ಎಂದರು. - ವಾಸು