ಮಡಿಕೇರಿ, ಆ. 27: ಕಳೆದ ಹಲವು ವರ್ಷಗಳಿಂದ ಜಿದ್ದಾಜಿದ್ದಿಯ ಪೈಪೋಟಿಗೆ ಕಾರಣವಾಗುತ್ತಿರುವ ಮಡಿಕೇರಿ ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಈ ಬಾರಿಯೂ ಚುನಾವಣೆ ಎದುರಾಗಿದೆ. ಒಟ್ಟು 12 ಮಂದಿ ಆಕಾಂಕ್ಷಿಗಳ ಪೈಕಿ ಹತ್ತು ಮಂದಿ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದು, ನಾಲ್ವರ ನಡುವೆ ಸ್ಪರ್ಧೆ ಏರ್ಪಟ್ಟಿರುವದರಿಂದ ತಾ. 28ರ ನಾಲ್ಕು ಗಂಟೆವರೆಗೆ ಒಮ್ಮತದ ತೀರ್ಮಾನಕ್ಕೆ ಕಾಲಾವಕಾಶ ನೀಡಲಾಗಿದ್ದು, ತೀರ್ಮಾನ ವಾಗದಿದ್ದಲ್ಲಿ ತಾ. 29 ರಂದು ಮಧ್ಯಾಹ್ನ 3.30 ಗಂಟೆಗೆ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.ದಶಮಂಟಪ ಸಮಿತಿ ಮೂಲಕ ದಸರಾ ಸಮಿತಿಗೆ ಕಾಯಾಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿ ಕಳುಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ನಡೆದ ಸಭೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಹತ್ತು ಮಂದಿ, ಉಪಾಧ್ಯಕ್ಷ ಸ್ಥಾನಕ್ಕೆ ಏಳು ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಐವರು ಆಕಾಂಕ್ಷಿಗಳ ಸೂಚನೆಯಾಗಿತ್ತು. ಹಾಗಾಗಿ ಇಂದು ದಶಮಂಟಪ ಸಮಿತಿ ಅಧ್ಯಕ್ಷ ಸಿ.ಎಸ್. ರಂಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನಡೆಸದೇ ಒಮ್ಮತದ ತೀರ್ಮಾನದೊಂದಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಿತು. ಹಾಗಾಗಿ ಆಕಾಂಕ್ಷಿಗಳಿಗೆ ತಾವುಗಳೇ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಲು 20 ನಿಮಿಷಗಳ ಸಮಯಾವಕಾಶ ನೀಡಲಾಯಿತು.ಪೈಪೋಟಿಯ ಕಾವು ಇತ್ತ ಚರ್ಚೆ ನಡೆಸಲು ಸಭಾಂಗಣದಿಂದ ಹೊರ ನಡೆದ ಆಕಾಂಕ್ಷಿಗಳು ಪರಸ್ಪರ ಚರ್ಚಿಸಿದರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಯಾವದೇ ಪೈಪೋಟಿ ಕಂಡು ಬಾರದೆ ಐವರು ಆಕಾಂಕ್ಷಿಗಳ ಪೈಕಿ ಕರವಲೆ ಭಗವತಿ ದೇವಾಲಯ ಸಮಿತಿಯ ಗಜೇಂದ್ರ (ಕುಶ) ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ 7 ಮಂದಿ ಪೈಕಿ ಕೆಲವರು ಸ್ಪರ್ಧೆಯಿಂದ ಹಿಂದೆ ಸರಿದರು. ಕೆಲವರು ತನಗೆ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಕೊನೆಯಲ್ಲಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿ ಕೋಟೆ ಗಣಪತಿ ದೇವಾಲಯದ ಬಿ.ಎಂ. ರಾಖೇಶ್ ಆಯ್ಕೆಯಾದರು.
ಆದರೆ ಇತ್ತ ಕಾರ್ಯಾಧ್ಯಕ್ಷ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಪೈಪೋಟಿಯ ಕಾವು ಏರತೊಡಗಿತು. 12 ಮಂದಿ ಆಕಾಂಕ್ಷಿಗಳ ಪೈಕಿ ಹತ್ತು ಮಂದಿ ಹಿಂದೆ ಸರಿದರೂ ಉಳಿದ ನಾಲ್ಕು ಮಂದಿ ಪೈಪೋಟಿಗೆ ಇಳಿದರು. ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ಜಿ. ಚಿದ್ವಿಲಾಸ್, ಉಮೇಶ್ ಸುಬ್ರಮಣಿ, ಕೆ.ಎಸ್. ರಮೇಶ್, ಆರ್.ಬಿ. ರವಿ, ಗುರುರಾಜ್, ಬಿ.ಎಂ. ರಾಜೇಶ್,
(ಮೊದಲ ಪುಟದಿಂದ) ನೆರವಂಡ ಜೀವನ್, ಟಿ.ಪಿ. ರಾಜೇಂದ್ರ ಅವರುಗಳು ಹಿಂದೆ ಸರಿದರು. ಇನ್ನುಳಿದ ರಾಬಿನ್ ದೇವಯ್ಯ, ಅನಿತಾ ಪೂವಯ್ಯ, ಡೀನ್ ಬೋಪಣ್ಣ ಹಾಗೂ ಪಿ.ಜಿ. ಮಂಜುನಾಥ್ ಅವರುಗಳ ನಡುವೆ ಸ್ಪರ್ಧೆ ಏರ್ಪಟ್ಟಿತು. ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಯಿತ್ತಲ್ಲದೆ, ಸಮಿತಿಯ ಪ್ರಮುಖರು ಮನವೊಲಿಸಲು ಯತ್ನಿಸಿದರಾದರೂ ಯಾವದೇ ಫಲ ಕಾಣಲಿಲ್ಲ. ಅಂತಿಮವಾಗಿ ಚುನಾವಣೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು.
ನಾಳೆ ಚುನಾವಣೆ: ನಂತರ ಮುಂದುವರಿದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ರಂಜಿತ್, ನಾಲ್ವರು ಆಕಾಂಕ್ಷಿಗಳು ಸ್ಪರ್ಧೆಯಲ್ಲಿರುವದರಿಂದ ಅವರುಗಳಿಗೆ ತಾ. 28 ರಂದು (ಇಂದು) ಸಂಜೆ 4 ಗಂಟೆಯೊಳಗಡೆ ಯಾವದಾದರೂ ತೀರ್ಮಾನಕ್ಕೆ ಬಂದಲ್ಲಿ ತಿಳಿಸುವಂತೆ ಅಥವಾ ತಾವು ಪ್ರತಿನಿಧಿಸುವ ದೇವಾಲಯ ಸಮಿತಿಯಿಂದ ಅಧಿಕೃತ ಅಭ್ಯರ್ಥಿಯೆಂದು ಲಿಖಿತ ಪತ್ರ ತರಬೇಕೆಂದು ಹೇಳಿದರು. ಅವಶ್ಯವಿದ್ದಲ್ಲಿ ತಾ. 29 ರಂದು ಮಧ್ಯಾಹ್ನ 3.30 ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಚುನಾವಣೆ ನಡೆಸಲಾಗುವದು. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಿರುವದರಿಂದ ಮತದಾನದಲ್ಲಿ ಪಾಲ್ಗೊಳ್ಳುವ ದಶಮಂಟಪಗಳ ಸಮಿತಿ ಸದಸ್ಯರುಗಳು ಆಯಾ ದೇವಾಲಯಗಳ ಸಮಿತಿಯ ಅಧಿಕೃತ ಲೆಟರ್ ಹೆಡ್‍ನಲ್ಲಿ ತಾನು ಮತದಾರ ಎಂಬ ಮಾಹಿತಿ ಇರುವ ಪತ್ರ ತಲಪಿಸುವಂತೆ ಸೂಚನೆ ನೀಡಿದರು.
ಪೈಪೋಟಿ ಬೇಡ...!: ಮಧ್ಯಾಹ್ನ ಸಭೆ ಆರಂಭವಾಗುತ್ತಿದ್ದಂತೆ ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಮಾತನಾಡಿ, ಕಳೆದ ವಾರ ನಡೆದ ಸಭೆಯ ಬಳಿಕ ಸಮಿತಿಯಿಂದ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ದಸರಾ ಉತ್ಸವದ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ ಜಿಲ್ಲಾಧಿಕಾರಿಗಳಿಗೆ ಮಡಿಕೇರಿಯಲ್ಲಿ ದಸರಾ ಉತ್ಸವ ಆಚರಿಸುತ್ತಿರುವ ವಿಚಾರವೇ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇದೀಗ ನಗರಸಭೆ ಆಡಳಿತ ಮಂಡಳಿ ಇಲ್ಲದೇ ಇರುವ ಕಾರಣ ದಶಮಂಟಪ ಸಮಿತಿಯಿಂದ ಕಾರ್ಯಾಧ್ಯಕ್ಷ ಸೇರಿದಂತೆ ಮೂರು ಹುದ್ದೆಗೆ ಪದಾಧಿಕಾರಿಗಳನ್ನು ನೇಮಕ ಮಾಡಬೇಕಾಗಿದೆ ಎಂಬ ಬಗ್ಗೆ ಗಮನಕ್ಕೆ ತರಲಾಗಿದ್ದು, ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸೆಪ್ಟೆಂಬರ್‍ನಲ್ಲಿ ಸಭೆ ಕರೆದು ಚರ್ಚಿಸುವ ಬಗ್ಗೆ ತಿಳಿಸಿದ್ದರೆಂದು ಹೇಳಿದರು.
ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿಯನ್ನು ನೇಮಕ ಮಾಡಿಬೇಕಾಗಿದ್ದು, ಒಟ್ಟು 12 ಮಂದಿ ಹೆಸರು ಸೂಚನೆಯಾಗಿದೆ. ಇದೀಗ ಚುನಾವಣೆ ಬೇಕಾ ಬೇಡವೇ ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಅರ್ಹರನ್ನು ಆಯ್ಕೆ ಮಾಡಿ ಯಶಸ್ವಿ ದಸರಾ ಆಚರಣೆಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ದಸರಾ ಸಮಿತಿ ಪ್ರಮುಖರಾದ ಜಿ. ಚಿದ್ವಿಲಾಸ್ ಅವರು ಈ ಹಿಂದೆ ಕಾರ್ಯಾಧ್ಯಕ್ಷರ ಆಯ್ಕೆ ಗೌರವಯುತವಾಗಿ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ ಮಾಡಲಾಗುತ್ತಿತ್ತು. ಸ್ನೇಹಾಚಾರದಲ್ಲಿ ಆಗುತ್ತಿದ್ದ ಆಯ್ಕೆ ಪ್ರಕ್ರಿಯೆ ನಂತರದ ಬೆಳವಣಿಗೆಯಲ್ಲಿ ಪೈಪೋಟಿಯಿಂದಾಗಿ ಸ್ವಾರ್ಥ ಆಪಾದನೆ, ನಿಂದನೆ, ಜಾತಿ, ಧರ್ಮ ರಾಜಕೀಯದ ವ್ಯವಸ್ಥೆಯಡಿ ಆಗುತ್ತಿದೆ. ಇದರಿಂದ ದಸರಾಗೆ ಅವಮಾನ ಆಗುತ್ತಿದೆ. ದೈವೀ ಶಕ್ತಿಯೆದುರು ಪೈಪೋಟಿ ಕಂಡುಬರುತ್ತಿದೆ.
ದಶಕಗಳ ಕಾಲ ಸಮಿತಿಯಲ್ಲಿ ದುಡಿದವರಿಗೆ ನೋವಿದೆ. ಮುಂದಿನ ಪೀಳಿಗೆಗೆ ಯಾವ ರೀತಿಯ ವ್ಯವಸ್ಥೆಯನ್ನು ಬಿಟ್ಟುಕೊಡುತ್ತಿದ್ದೇವೆಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಇಂತಹ ಕೆಟ್ಟ ವ್ಯವಸ್ಥೆಗೆ ಅಂತ್ಯ ಹಾಡಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಾರಿ ನನ್ನ ಹೆಸರೂ ಸೂಚನೆಯಾಗಿದ್ದರೂ, ತಾನು ಸ್ಪರ್ಧೆಗೆ ಇಲ್ಲ, ಬೈಲಾ ತಿದ್ದುಪಡಿ ಮಾಡಬೇಕೆಂಬ ಆಕಾಂಕ್ಷೆ ಇತ್ತಾದರೂ, ಅದರಲ್ಲಿ ವಿಫಲವಾದವನು; ಸರಿಯಾದ ವ್ಯವಸ್ಥೆಗೆ ಸಹಕಾರ ಇದೆ. ಸಂಸ್ಕøತಿಯ ಶಿಸ್ತು, ಶಾಂತಿ, ಸೌಹಾರ್ದತೆಯ ದಸರಾ ಆಚರಿಸುವಂತಾಗಲಿ ಎಂದು ಹೇಳಿದರು.
ಅನಿತಾ ಪೂವಯ್ಯ ಮಾತನಾಡಿ, ತಾನು ಕಾರ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದು, ಕೆಲವರು ತಾನು ಮಹಿಳೆ ಎಂಬ ಕಾರಣಕ್ಕೆ ನನ್ನಿಂದ ಜವಾಬ್ದಾರಿ ನಿಭಾಯಿಸಲು ಸಾಧ್ಯವಿಲ್ಲವೆಂಬ ಮಾತುಗಳನ್ನಾಡಿದ್ದಾರೆ. ಇದರಿಂದ ಬೇಸರವಾಗಿದೆ. 12 ಮಂದಿಯಲ್ಲಿ ಚುನಾವಣೆಯಲ್ಲಿ ಯಾರೇ ಗೆದ್ದರೂ ಉಳಿದ 11 ಮಂದಿಗೆ ನೋವಾಗುತ್ತದೆ. ವಿರೋಧ ವ್ಯಕ್ತಗೊಳ್ಳಲಿದೆ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಲಿದೆ ಎಲ್ಲರೂ ಕುಳಿತು ಮಾತನಾಡಿ ಸರಿಪಡಿಸಿಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡುವದೊಳಿತೆಂದು ಸಲಹೆ ಮಾಡಿದರು.
ಆರ್.ಬಿ. ರವಿ ಮಾತನಾಡಿ, ಸರಕಾರದಿಂದ ಅನುದಾನ ಬಾರದಿದ್ದಂತಹ ಸಂದರ್ಭದಲ್ಲಿ ಯಾರೂ ಆಕಾಂಕ್ಷಿಗಳಿರುತ್ತಿರಲಿಲ್ಲ. ಕೈಯಿಂದ ಹಣ ಹಾಕಿ ದಸರಾ ಮಾಡಿದವರಿದ್ದಾರೆ. ಇದೀಗ ಅನುದಾನ ಬರುತ್ತಿದೆ. ದೊಡ್ಡ ವೇದಿಕೆಯನ್ನು ಅಲಂಕರಿಸಲು ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಮತದಾನದ ವ್ಯವಸ್ಥೆ ಇತ್ತೀಚಿನ ಬೆಳವಣಿಗೆಯಾಗಿದೆ. ಉತ್ಸವಕ್ಕೆ ಎಲ್ಲರೂ ಕೈಜೋಡಿಸಿ ಅನುದಾನ ತರುವ ವ್ಯವಸ್ಥೆ ಆಗಬೇಕಿದೆ. ಚುನಾವಣೆ ನಡೆಯುವದು ಬೇಡ; ಅರ್ಹರನ್ನು ಆಯ್ಕೆ ಮಾಡೋಣವೆಂದರು.
ಉಮೇಶ್ ಸುಬ್ರಮಣಿ ಮಾತನಾಡಿ ದಸರಾಗೆ ಸಮಿತಿ ರಚನೆ ಮಾಡುವಾಗ ಎಲ್ಲರೂ ಇರುತ್ತಾರೆ. ಸರಕಾರದಿಂದ ಅನುದಾನ ತರುವಾಗ ಕೆಲಸ ಕಾರ್ಯಗಳಿಗೆ ಯಾರೂ ಇರುವದಿಲ್ಲ. ಎಲ್ಲವನ್ನೂ ಕಾರ್ಯಾಧ್ಯಕ್ಷರ ಮೇಲೆ ಹಾಕುವದಲ್ಲ; ಉಪಸಮಿತಿಯವರೂ ಕೂಡ ಕೈಜೋಡಿಸಬೇಕೆಂದು ಹೇಳಿದರು.
ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಕಾರ್ಯಾಧ್ಯಕ್ಷರಾಗಿ ಆಯ್ಕೆ ಆಗುವವರು ಸರಕಾರದÀ ಅನುದಾನದ ಮೇಲೆ ಕಣ್ಣಿಡಬಾರದು. ಈ ಬಾರಿ ಕಾರ್ಯಾಧ್ಯಕ್ಷರ ಮೇಲೆ ಮಹತ್ತರ ಜವಾಬ್ದಾರಿಯಿದೆ ಎಂದರಲ್ಲದೆ, ಉಪಸಮಿತಿಗಳು ಕೂಡ ಅನುದಾನಕ್ಕೆ ಬೇಡಿಕೆ ಇಡುವದು ಸರಿಯಲ್ಲವೆಂದರು. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳೇ ತೀರ್ಮಾನ ಮಾಡಿ ಯಾವದೇ ಕಪ್ಪು ಚುಕ್ಕಿ ಬಾರದಂತೆ ಎಲ್ಲರ ಸಹಕಾರದೊಂದಿಗೆ ಮಾದರಿಯಾಗುವಂತೆ ದಸರಾ ಆಚರಿಸುವಂತಾಗಲಿ ಎಂದು ಆಶಿಸಿದರು.
ಬಿ.ಎಂ. ರಾಜೇಶ್ ಮಾತನಾಡಿ, ಈಗಾಗಲೇ ಸಮಯ ಮೀರಿದೆ ಹಾಗಾಗಿ 12 ಮಂದಿಗೆ ಒಮ್ಮತದ ತೀರ್ಮಾನಕ್ಕೆ ಬರಲು ಕಾಲಾವಕಾಶ ನೀಡುವಂತೆ ಕೋರಿದರು. ನಂತರ ಕಾಲವಕಾಶ ನೀಡಲಾಯಿತು.
ಬೈಲಾ ಬಗ್ಗೆ ಚರ್ಚೆ: ಕಾಲಾವಕಾಶ ನೀಡಿದ ಬಳಿಕದ ಚರ್ಚೆಯಲ್ಲಿ ಭಾಗವಹಿಸಿದ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರು ಚುನಾವಣೆ ಘೋಷಣೆಯಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಹಿಂದಿನ ಬೈಲಾದಲ್ಲಿ ಮತದಾರರು ಯಾರಿದ್ದಾರೆಂಬ ಗೊಂದಲದಲ್ಲಿದ್ದೇವೆ. ಆಕಾಂಕ್ಷಿಗಳು ಕೂಡ ಒಮ್ಮತದ ತೀರ್ಮಾನಕ್ಕೆ ಬಂದಲ್ಲಿ ಹಾಗಾಗಿ ಒಂದು ದಿನದ ಕಾಲಾವಕಾಶ ಬೇಕಿದ್ದು, ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಆಯ್ಕೆ ಆಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಿತಾ ಪೂವಯ್ಯ ಅವರು, ಬೈಲಾದಲ್ಲಿ ಕಾರ್ಯಾಧ್ಯಕ್ಷ ಆಯ್ಕೆ ಬಗ್ಗೆ ಚುನಾವಣೆ ನಡೆಯುವ ಬಗ್ಗೆ ಯಾವದೇ ಮಾಹಿತಿ ನೀಡಲಾಗಿಲ್ಲ. ಯಾರು ಮತದಾನ ಮಾಡಬೇಕೆಂಬ ಉಲ್ಲೇಖವಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ರಾಬಿನ್ ದೇವಯ್ಯ ಮಾತನಾಡಿ, ಕಳೆದ ಬಾರಿ ಯಾವ ರೀತಿಯ ಪ್ರಕ್ರಿಯೆಯಡಿ ಚುನಾವಣೆ ನಡೆಸಿದಿರಿ, ಯಾರು ಮತದಾರರು ಎಂದು ಸಭೆಯಲ್ಲಿ ಪ್ರಶ್ನಿಸಿದರು. ಈ ಸಂದರ್ಭ ಚಿದ್ವಿಲಾಸ್ ಹಾಗೂ ಆರ್.ಬಿ. ರವಿ ಅವರು ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮತ್ತೊಮ್ಮೆ ಬೈಲಾ ತಿದ್ದುಪಡಿ ಮಾಡುವ ಬಗ್ಗೆ ಸಲಹೆಗಳು ಕೇಳಿ ಬಂದವು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ರತಿಕೇಶನ್, ಕಾರ್ಯದರ್ಶಿ ಸತೀಶ್, ಕೆ.ಕೆ. ಮೋಹನ್, ಉಮೇಶ್ ಕುಮಾರ್ ಇದ್ದರು.