ಗೋಣಿಕೊಪ್ಪಲು, ಆ. 26: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿ ಹಾಗೂ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು ರಾಜ್ಯದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊಡಗು ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಮನವರಿಕೆ ಮಾಡಿದರು. ವಿಧಾನಸೌಧದಲ್ಲಿ ಭೇಟಿ ಮಾಡಿದ ರೈತ ಮುಖಂಡರು ಜಿಲ್ಲೆಯ ರೈತರು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಈ ಬಾರಿಯ ಅತಿವೃಷ್ಟಿಯಿಂದ ಅನುಭವಿಸುತ್ತಿರುವ ತೊಂದರೆಗೆ ತಕ್ಷಣ ಪರಿಹಾರ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಕೊಡಗನ್ನು ರಾಷ್ಟ್ರೀಯ ಪಾಕೃತಿಕ ವಿಪತ್ತಿನ ಪಟ್ಟಿಯಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರವು ಕೆಂದ್ರ ಸರಕಾರಕ್ಕೆ ಮನವರಿಕೆ ಮಾಡಬೇಕು. ಜಿಲ್ಲೆಯು ಕಳೆದೆರಡು ವರ್ಷದಿಂದ ಹಿಂದೆಂದೂ ಕಂಡರಿಯದ ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಗುಡ್ಡಕುಸಿತ,ಮನೆಹಾನಿ, ಜೀವ ಹಾನಿ, ಸಂಭವಿಸಿದೆ.

ಕೊಡಗಿನ ಹಲವು ಕಡೆ ಭೂಮಿ ಬಿರುಕು ಬಿಟ್ಟು ಭಯದ ವಾತಾವರಣ ಸೃಷ್ಟಿಯಾಗಿದೆ. ಪ್ರಮುಖ ಬೆಳೆಯಾದ ಕಾಫಿ,ಭತ್ತ, ಅಡಕೆ, ಕರಿಮೆಣಸಿನ ಬೆಳೆಗಳು ಹಾಳಾಗಿ ರೈತರ ಬದುಕು ಬಹಳಷ್ಟು ಕಷ್ಟಕರವಾಗಿದೆ. ಮಾನವೀಯತೆ ದೃಷ್ಟಿಯಿಂದ ರಾಜ್ಯ ಸರಕಾರವು ಕೊಡಗಿನ ಎಲ್ಲಾ ರೈತರು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಪಡೆದ ಕೃಷಿಗೆ ಸಂಬಂಭಪಟ್ಟ ಸಾಲಗಳನ್ನು, ಮನ್ನಾ ಮಾಡುವಂತೆ ಒತ್ತಾಯಿಸಿದರು.

ದಕ್ಷಿಣ ಕೊಡಗಿಗೆ ಮೂಲ ಸಂಪರ್ಕ ಕಲ್ಪಿಸುವ ಹುಣಸೂರು -ಅಳ್ಳೂರ್- ಆನೆಚೌಕೂರ್-ಗೋಣಿಕೊಪ್ಪ ರಸ್ತೆಯು ಕಳೆದ ನೂರಾರು ವರ್ಷಗಳಿಂದ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿದ್ದು,

ಕೊಡಗಿನ ಜನರು ತಮ್ಮ ಜೀವ ಉಳಿಸಿಕೊಳ್ಳಲು ಯಾವದೇ ಉತ್ತಮ ಆಸ್ಪತ್ರೆಯಾಗಲಿ ಕೊಡಗಿನಲ್ಲಿಲ್ಲ, ರಾತೋರಾತ್ರಿ ಆಸ್ಪತ್ರೆಗೆ ತೆರಳಲು ಹಾಗೂ ಮಳೆಗಾಲದಲ್ಲಿ ಕೊಡಗಿನ ಎಲ್ಲಾ ಬಾಗದ ಜನರು ಈ ರಸ್ತೆಯನ್ನು ಅವಲಂಭಿಸಿದ್ದಾರೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ ಇದಾಗಿದೆ.

ಕೆಲವು ಪರಿಸರವಾದಿಗಳ ಜೊತೆ ಅರಣ್ಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಈ ರಸ್ತೆಯನ್ನು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿಸಿದೆ, ಇನ್ನೂ ಕೆಲವು ದಿವಸಗಳಲ್ಲಿ ಈ ರಸ್ತೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಲ್ಪಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹರಿಯ ಬಿಟ್ಟು ಜಿಲ್ಲೆಯ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಇದರ ಬಗ್ಗೆ ರಾಜ್ಯ ಸರಕಾರ ಕೂಡಲೇ ಕ್ರಮಕೈಗೊಂಡು ಈ ಭಾಗದ ಜನರಿಗೆ ನ್ಯಾಯ ಒದಗಿಸಬೇಕು.

ಈ ತರಹದ ಯಾವದಾದರೂ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದೆ ಇದ್ದರೆ ಇದನ್ನು ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಬೇಕು ಎಂದು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮನವಿ ಮಾಡಿದರು.

ಕೊಡಗಿನ ಜನ ತಮ್ಮ ಜಮೀನನ್ನು ಕಂದಾಯ ಭೂಮಿಯಾಗಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಲು ಸರಕಾರದ ಕಾನೂನಿಂದ ಪಟ್ಟೆದಾರರ ಹೆಸರು ತೆಗೆಯಲು, ಭೂಮಿಯ ಪಹಣಿಯಲ್ಲಿ ಹಲವರ ಹೆಸರಿದ್ದು ಮತ್ತು ನಿಧನರಾದವರ ಹೆಸರನ್ನು ತೆಗೆಯಲು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದು ಇದನ್ನು ಕೂಡಲೇ ಸರಿಪಡಿಸಬೇಕು.

ಕೊಡಗಿನ ಪ್ರಮುಖ ಸಮಸ್ಯೆಯಾದ ಆನೆ-ಮಾನವ ಸಂಘರ್ಷಕ್ಕೆ ಶಾಸ್ವತ ಪರಿಹಾರ ನೀಡುವ ಬಗ್ಗೆ ಮತ್ತು ರೈತರ ಜಮೀನು ಹಾಗೂ ಸಾಕು ಪ್ರಾಣಿಗಳಿಗೆ ಹಾನಿಯಾದ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಪರಿಹಾರ ನೀಡುವಂತೆ ಕಾನೂನು ರೂಪಿಸುವದು, ಕೊಡಗಿನ ಅರಣ್ಯದಂಚಿನಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲ್‍ಪುರ ನಾಗೇಂದ್ರ, ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್, ದರ್ಶನ್ ಪುಟ್ಟಣ್ಣಯ್ಯ, ಪ್ರ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪೊನ್ನಂಪೇಟೆ ಸಂಚಾಲಕ ಆಲೆಮಾಡ ಮಂಜುನಾಥ್, ವಜ್ರು ಬೋಪಣ್ಣ ಮತ್ತು ಇತರರು ಹಾಜರಿದ್ದರು.

- ಹೆಚ್.ಕೆ. ಜಗದೀಶ್.