ಮಡಿಕೇರಿ, ಆ. 26: ಗೋಣಿಕೊಪ್ಪ-ಹುಣಸೂರು ರಸ್ತೆಯನ್ನು ರಾತ್ರಿ ಬಂದ್ ಮಾಡಲಾಗುವದಾಗಿ ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆಂದು ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ಆರೋಪಿಸಿದೆ.ಈ ಬಗ್ಗೆ ಸರಕಾರವಾಗಲಿ, ನ್ಯಾಯಾಲಯವಾಗಲೀ ಯಾವದೇ ಹೇಳಿಕೆ ನೀಡದಿದ್ದರೂ ಹಲವು ಸ್ವಹಿತಾಸಕ್ತರು ಜನರಲ್ಲಿ ಗೊಂದಲ ಮೂಡಿಸುವ ಯತ್ನ ಮಾಡುತ್ತಿದ್ದಾ ರೆಂದು ಸಂಸ್ಥೆಯ ಟ್ರಸ್ಟಿಗಳಾದ ತಮ್ಮು ಪೂವಯ್ಯ ಹಾಗೂ ಕೆ.ಎಂ. ಚಿಣ್ಣಪ್ಪ ಟೀಕಿಸಿದ್ದಾರೆ.ತಾ. 7 ರಂದು ರಾಷ್ಟ್ರದ ಉಚ್ಚನ್ಯಾಯಾಲಯವು ಪರಿಸರ ಮತ್ತು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದ್ದು, ಗೋಣಿಕೊಪ್ಪ-ಹುಣಸೂರಿನ ಈಗಿನ ರಾಜ್ಯ ಹೆದ್ದಾರಿ ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಯಾವ ರೀತಿ ಪರಿವರ್ತಿಸಲಾಗುವದು ಎಂಬ ಬಗ್ಗೆ 4 ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವದನ್ನು ಇವರುಗಳು ಉಲ್ಲೇಖಿಸಿದ್ದಾರೆ.ನ್ಯಾಯಾಲಯದ ವಿಚಾರಣೆ ಸಂದರ್ಭ ರಾಜ್ಯ ಸರಕಾರದ ಪರ ವಕೀಲರು ಕರ್ನಾಟಕ ಹಾಗೂ ಕೇರಳ ರಾಜ್ಯವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ 75 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ದಾಗಿ ಹೇಳಿಕೆ ನೀಡಿದ್ದು, ಇಂತಹ ಸಂದರ್ಭದಲ್ಲಿ ರಾತ್ರಿ ವೇಳೆ ರಸ್ತೆ ಬಂದ್ ಮಾಡುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇದೇ ರೀತಿ ಯುನೆಸ್ಕೋ ಹೆರಿಟೇಜ್ ಸೈಟ್ ವಿಷಯ, ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳಿಂದಲೂ ಜನತೆ ತೊಂದರೆಗೆ ಈಡಾಗುತ್ತಾರೆಂದು ಕಪೋಲಕಲ್ಪಿತ ವರದಿಗಳನ್ನು ಕೆಲವರು ಹರಡಿದ್ದು, ಚುನಾಯಿತ ಪ್ರತಿನಿಧಿಗಳು ಕೂಡ ಈ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಹಾಗೂ ಜನತೆ ಗೊಂದಲಕ್ಕೆ ಒಳಗಾಗದಂತೆ ಇವರುಗಳು ಭರವಸೆ ನೀಡಬೇಕೆಂದು ಸಲಹೆ ಇತ್ತಿದ್ದಾರೆ.