ಮಡಿಕೇರಿ, ಆ. 26: ನಗರದ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ದಿಢೀರ್ ಭೇಟಿ ನೀಡುವದರೊಂದಿಗೆ, ನಗರಸಭೆಯ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದರು.ಇಲ್ಲಿನ ನೂತನ ಬಸ್ ನಿಲ್ದಾಣಕ್ಕೆ ಮೇಲ್ಮನೆ ಸದಸ್ಯರು ಭೇಟಿ ನೀಡುತ್ತಿದ್ದಂತೆಯೇ ಖಾಸಗಿ ಬಸ್ ಸಿಬ್ಬಂದಿ, ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಎದುರುಗೊಂಡು, ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕನಿಷ್ಟ ಮೂಲಭೂತ ಸೌಲಭ್ಯ ಇಲ್ಲದಿರುವ ಕುರಿತು ಗಮನ ಸೆಳೆದರಲ್ಲದೆ, ನೀರಿನ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಈ ವೇಳೆ ಶೌಚಾಲಯದತ್ತ ಹೆಜ್ಜೆ ಇರಿಸಿದ ಸುನಿಲ್ ಸುಬ್ರಮಣಿ, ನಗರಸಭೆ ಆಯುಕ್ತರ ಸಹಿತ ಆರೋಗ್ಯ ಅಧಿಕಾರಿಗಳನ್ನು ಪ್ರತ್ಯಕ್ಷ ಶೌಚಾಲಯ ವೀಕ್ಷಿಸುವಂತೆ ಸೂಚಿಸಿದರು. ಅಲ್ಲಿ ಕೈ ತೊಳೆಯಲು ಕೂಡ ನೀರಿನ ಸಂಪರ್ಕವಿಲ್ಲದೆ ದುರ್ನಾತ ಬೀರುತ್ತಿದ್ದ ಕುರಿತು ಅಸಮಾಧಾನ ಹೊರಗೆಡವಿದರು.ಕಪ್ಪು ಪಟ್ಟಿಗೆ: ಅಲ್ಲದೆ ಖಾಸಗಿ ಬಸ್ ನಿಲ್ದಾಣ ಕಾಮಗಾರಿಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ತಾಕೀತು ಮಾಡಿದ ಅವರು, ಅಲ್ಲಲ್ಲಿ ಕಿತ್ತು ಹೋಗಿರುವ ಟೈಲ್ಸ್, ಈಗಲೇ ತುಕ್ಕು ಹಿಡಿದಿರುವ ಉಪಕರಣಗಳು, =(ಮೊದಲ ಪುಟದಿಂದ) ಕಾಂಕ್ರಿಟ್ ಕಿತ್ತು ಹೋಗಿ ಗುಂಡಿ ಬಿದ್ದಿರುವ ನಿಲ್ದಾಣವನ್ನು ತಕ್ಷಣ ಸರಿಪಡಿಸಲು ನೋಟೀಸ್ ಜಾರಿ ಗೊಳಿಸುವಂತೆ ಇಂಜಿನಿಯರ್‍ಗಳಿಗೆ ಆದೇಶಿಸಿದರು.ಮೂತ್ರಕ್ಕೂ ಹಣ: ದುರ್ನಾತ ಬೀರುತ್ತಿರುವ ಶೌಚಾಲಯದ ನಿರ್ವಹಣೆಯಿಲ್ಲದೆ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೂ, ನಾಮಫಲಕ ಅಳವಡಿಸಿ ಮೂತ್ರ ವಿಸರ್ಜಿಸಲು ರೂ. 2 ಹಾಗೂ ಶೌಚಾಲಯ ಬಳಕೆಗೆ ರೂ. 5 ದರ ನಿಗಧಿಗೊಳಿಸಿರುವದು ಕಂಡುಬಂತು. ನಿಲ್ದಾಣದ ಎಲ್ಲೆಂದರಲ್ಲಿ ದನಗಳ ಸಗಣಿ, ಕೊಳಕು ಕಸದ ರಾಶಿಯಿಂದ ಮತ್ತಷ್ಟು ಕೆರಳಿದ ಅವರು ಒಂದು ವಾರದೊಳಗೆ ಎಲ್ಲವನ್ನು ಸರಿಪಡಿಸಲು ಸೂಚಿಸಿದರು.

ನಗರಸಭೆ ಮಾಜೀ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಹಾಗೂ ಇತರರು ಪಾಲ್ಗೊಂಡಿದ್ದರು.