ಮಡಿಕೇರಿ, ಆ. 25: ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ತೊಂಬತ್ತುಮನೆ ಯಲ್ಲಿ ವಾರದ ಹಿಂದೆ ಅನ್ಯಕೋಮಿನ ವ್ಯಕ್ತಿಯೊಬ್ಬನ ಮನೆಯ ತಡೆಗೋಡೆಗೆ ಮತ್ತೊಂದು ಕೋಮಿನ ವ್ಯಕ್ತಿಯ ವಾಹನ ಡಿಕ್ಕಿಯಾಗಿ ತಡೆಗೋಡೆ ಹಾನಿಗೊಂಡಿರುವ ಪ್ರಸಂಗ ಸಂಬಂಧ ಪರಸ್ಪರ ಹೊಡೆದಾಟದೊಂದಿಗೆ ಇದೀಗ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಈ ನಡುವೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಇಂದು ಯತೀಶ್ ಎಂಬಾತನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ವಾರದ ಹಿಂದೆ ಹಾಕತ್ತೂರು ಬಳಿಯ ತೊಂಬತ್ತುಮನೆ ನಿವಾಸಿ ಗಳಾದ ಮಹಮ್ಮದ್ ಆಲಿ ಹಾಗೂ ಎಂ. ಶರೀಫ್ ಎಂಬವರ ಮನೆಯ ತಡೆಗೋಡೆಗೆ ಅಲ್ಲಿನ ನಿವಾಸಿ ಯತೀಶ್ ಎಂಬವರ ವಾಹನ ಡಿಕ್ಕಿಯಾಗಿ ಹಾನಿ ಸಂಭವಿಸಿದೆ. ಈ ವೇಳೆ ಪರಸ್ಪರ ಮಾತುಕತೆ ಮೂಲಕ ಬಿದ್ದ ಗೋಡೆ ಸರಿಪಡಿಸಿಕೊಡುವಂತೆ ಒಡಂಬಡಿಕೆಯಾಗಿದೆ.ಆನಂತರದಲ್ಲಿ ತಡೆಗೋಡೆ ಕಟ್ಟಿಕೊಡದ ವಿಚಾರವಾಗಿ ಉಭಯಕಡೆ ಮಾತಿನ ಚಕಮಕಿ ಯೊಂದಿಗೆ ಹೊಡೆದಾಟ ನಡೆದಿದೆ. ಈ ವೇಳೆ
(ಮೊದಲ ಪುಟದಿಂದ) ಯತೀಶ್ ಮೇಲೆ ಎದುರಾಳಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ. ಈ ಕೃತ್ಯವನ್ನು ಖಂಡಿಸಿ ಇಂದು ಪ್ರತಿಭಟನೆಯೂ ನಡೆದು, ಸಂಘಟನೆ ಪ್ರಮುಖ ಕುಕ್ಕೇರ ಅಜಿತ್ ಇಂತಹ ಕೃತ್ಯ ಮರುಕಳಿಸದಂತೆ ಪೊಲೀಸ್ ಇಲಾಖೆ ಕಾನೂನು ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ, ಘಟನೆಯ ಜಾಗ ಪರಿಶೀಲಿಸುವದರೊಂದಿಗೆ, ಸಾರ್ವಜನಿಕ ರಸ್ತೆ ಅತಿಕ್ರಮಿಸಿ ತಡೆಗೋಡೆ ನಿರ್ಮಿಸಿರುವದನ್ನು ಕೂಡಲೇ ತೆರವುಗೊಳಿಸುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದಾರೆ.
ಇನ್ನೊಂದೆಡೆ ಹಲ್ಲೆ ಆರೋಪಿ ಎಂ. ಶರೀಫ್ ಎಂಬಾತನನ್ನು ಬಂಧಿಸಿ ರುವ ಪೊಲೀಸರು ತಲೆಮರೆಸಿ ಕೊಂಡಿರುವ ಮಹಮ್ಮದ್ ಆಲಿ ವಿರುದ್ಧ ಕ್ರಮ ಜರುಗಿಸಲು ಬಲೆ ಬೀಸಿದ್ದಾರೆ. ಅಲ್ಲದೆ ಯತೀಶ್ ಕೂಡ ಹಲ್ಲೆ ನಡೆಸಿರುವದಾಗಿ ಗ್ರಾಮಾಂತರ ಠಾಣೆಯಲ್ಲಿ ಪ್ರತಿದೂರು ದಾಖಲಿ ಸಲಾಗಿದೆ. ಇದೀಗ ಗಾಯಾಳು ಯತೀಶ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣಾಧಿಕಾರಿ ಚೇತನ್ ನೇತೃತ್ವದಲ್ಲಿ ಹಾಕತ್ತೂರು ವ್ಯಾಪ್ತಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.