ಸಿದ್ದಾಪುರ, ಆ. 25: ಈ ಬಾರಿಯ ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನೂರಾರು ಮನೆಗಳು ಮುಳುಗಡೆ ಗೊಂಡಿದೆ ಅಲ್ಲದೆ ಭಯ ಸೃಷ್ಟಿ ಮಾಡಿತ್ತು. ಕೊಂಡಂಗೇರಿ ನದಿತೀರದ ನಿವಾಸಿಗಳು ಇನ್ನು ಪ್ರವಾಹದ ಭೀತಿಯಿಂದ ಹೊರಬಂದಿಲ್ಲ; ಎಲ್ಲಿ ನೋಡಿದರೂ ಕುಸಿದ ಮನೆಗಳು ಕಂಡುಬರುತ್ತಿದೆ. ಮಡುಗಟ್ಟಿದ ದುಃಖದೊಂದಿಗೆ ಮೌನ ಆವರಿಸಿದೆ.

ಸುಮಾರು 40 ವರ್ಷಗಳಿಂದ ನದಿತೀರದಲ್ಲಿ ವಾಸ ಮಾಡಿಕೊಂಡಿರುವ ಕುಟುಂಬಗಳು ಈ ಬಾರಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಇದಲ್ಲದೆ ಮನೆಯ ಸಾಮಾಗ್ರಿಗಳು ನೀರುಪಾಲಾಗಿದೆ. ಕೊಂಡಂಗೇರಿ ಗ್ರಾಮವು ಈ ಬಾರಿಯ ಪ್ರವಾಹದಿಂದಾಗಿ ನಲುಗಿ ಹೋಗಿದೆ. ಈ ಬಾರಿಯ ಪ್ರವಾಹ ಊಹಿಸಲಾರದಷ್ಟು ಅನಾಹುತಗಳನ್ನು ಮಾಡಿದೆ; ನದಿತೀರದ ಮನೆಗಳು ಮುಳುಗಡೆಯಾಗಿದೆ.

ನದಿ ದಡದಲ್ಲಿದ್ದ 25 ವರ್ಷಗಳ ಹಿಂದಿನ ತೆಂಗಿನ ಮರಗಳು ನದಿ ಪಾಲಾಗಿದೆ. ಶಾಶ್ವತ ಸೂರಿಗಾಗಿ ಕಾಯುತ್ತಿದ್ದಾರೆ. ನದಿತೀರದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬೆಲೆಬಾಳುವ ವಸ್ತುಗಳು, ಟಿವಿ, ಗಾಡ್ರೆಜ್ ಇನ್ನಿತರ ಪೀಠೋಪಕರಣ ಗಳು ಹಾನಿಯಾಗಿದೆ. ಹಲವಾರು ಮನೆಗಳ ಪೀಠೋಪಕರಣಗಳು ಮಣ್ಣುಪಾಲಾಗಿದೆ. ಸಾವಿರಾರು ಮಂದಿ ಮಸೀದಿಗಳಲ್ಲಿ ತೆರೆಯಲಾಗಿದ್ದ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಪ್ರವಾಹದಿಂದಾಗಿ ಕೊಂಡಂಗೇರಿ ಮಸೀದಿ ಸಂಪೂರ್ಣ ಮುಳುಗಡೆ ಗೊಂಡಿತ್ತು. ನದಿಯಲ್ಲಿ ನೀರಿನ ಪ್ರವಾಹದಿಂದಾಗಿ ಪ್ಲಾಸ್ಟಿಕ್ ಚೀಲಗಳು ಇನ್ನಿತರ ವಸ್ತುಗಳು ಹರಿದುಬಂದು ಸೇರಿದೆ.

ಕೊಂಡಂಗೇರಿಯಲ್ಲಿ ಸಾಕಷ್ಟು ವಿವಾಹ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಬೇಕಾಗಿತ್ತು. ಆದರೆ ಮನೆಗಳು ಕುಸಿದು ಬಿದ್ದಿದೆ. ಮದುವೆ ಕಾರ್ಯ ನಡೆಸಬೇಕಾದ ಪೋಷಕರು ತಲೆಮೇಲೆ ಕೈ ಹಿಡಿದುಕೊಂಡು ಇದ್ದಾರೆ. ಯಾವ ರೀತಿಯಲ್ಲಿ ತಮ್ಮ ಪುತ್ರಿಯನ್ನು ವಿವಾಹ ಮಾಡಿಕೊಡು ವದಾಗಿ ಚಿಂತಿಸುತ್ತಿದ್ದಾರೆ. ಈ ಭಾಗದಲ್ಲಿ ಸಣ್ಣಪುಟ್ಟ ಕರಿಮೆಣಸು, ಕಾಫಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಶೇಖರಿಸಿಟ್ಟಿದ್ದ ಮೆಣಸು, ಕಾಫಿ ನೀರುಪಾಲಾಗಿ ಅಪಾರ ನಷ್ಟ ಸಂಭವಿಸಿದೆ.

ಕೊಂಡಂಗೇರಿ ಮಸೀದಿಯಲ್ಲಿ ಸಂತ್ರಸ್ತರಿಗೆ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಕೊಡಲಾಗುತ್ತಿದೆ. ಜಾತಿಭೇದವಿಲ್ಲದೆ ಪ್ರತಿಯೊಂದು ಸಂತ್ರಸ್ತರ ಕುಟುಂಬಗಳಿಗೆ ವಸ್ತುಗಳನ್ನು ವಿತರಿಸಿದ್ದಾರೆ. ಮಸೀದಿಯ ಸಮಿತಿಯವರು ನದಿತೀರದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಈಗಾಗಲೇ ದಾನಿಯೊಬ್ಬರು ತಮ್ಮ ತೋಟದಿಂದ ಒಂದು ಎಕರೆ ಜಾಗವನ್ನು ಉದಾರ ವಾಗಿ ದಾನ ಮಾಡಿ ಸಂತ್ರಸ್ತರಿಗೆ ಒದಗಿಸಿಕೊಡಲು ಮುಂದೆ ಬಂದಿದ್ದು, ಇನ್ನು ಕೆಲವು ದಾನಿಗಳು ಜಾಗ ನೀಡುವ ಸಾಧ್ಯತೆ ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೊಳಗಾದ ಸಂತ್ರಸ್ತರು ಸೂರು ಸಿಗುವ ಆಶಾಭಾವನೆ ಹೊಂದಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಮಳೆ ಯಿಂದಾಗಿ ಪ್ರವಾಹ ಗ್ರಾಮಸ್ಥರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರ ಕೂಡ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಿ ಸಮಸ್ಯೆಗಳಿಗೆ ಸ್ಪಂದಿಸಲು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

ಚಿತ್ರ-ವರದಿ: ವಾಸು