ಕುಶಾಲನಗರ, ಆ. 25: ಬೆಂಗಳೂರು - ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ; ಮೈಸೂರು - ಕೊಡಗು ಜಿಲ್ಲೆಗಳನ್ನು ಬೆಸೆಯುವ ಸೇತುವೆಯು; ನಮ್ಮ ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರದಲ್ಲಿ ಕಾವೇರಿ ಹೊಳೆಗೆ ಅಡ್ಡಲಾಗಿ ನಿರ್ಮಾಣಗೊಂಡಿದ್ದಾಗಿದೆ. ಈ ಸೇತುವೆಯಲ್ಲಿ ಇದೀಗ ಬಿರುಕು ಕಾಣಿಸಿಕೊಂಡು ಹೆದ್ದಾರಿಯ ವಾಹನಗಳ ಚಾಲಕರು ಹಾಗೂ ಜನವಲಯದಲ್ಲಿ ಆತಂಕ ಸೃಷ್ಟಿಸಿದೆ. ಕಾರಣ ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಸುರಿದ ಆಶ್ಲೇಷ ಮಳೆಯ ಆರ್ಭಟದಿಂದ ಈ ಸೇತುವೆ ಮುಳುಗಡೆಗೊಂಡು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.ಅಲ್ಲದೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು - ಮಡಿಕೇರಿ - ಮಂಗಳೂರು ನಡುವಿನ ಪ್ರಯಾಣಿಕರೊಂದಿಗೆ; ಇತರ ವಾಹನಗಳ ಪ್ರಯಾಣಿಕರು ವಾರಗಟ್ಟಲೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಬವಣೆ ಪಡಬೇಕಾಗಿತು.
ಭಾರೀ ಮಳೆ ಹಿನ್ನಲೆಯಲ್ಲಿ ಕಾವೇರಿ ನದಿ ತುಂಬಿ ಹರಿದ ಕಾರಣವೆಂಬಂತೆ; ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರ-ಸಂಪಾಜೆ ವ್ಯಾಪ್ತಿಯ ರಸ್ತೆ ಕೆಲವೆಡೆ ಹಾನಿಯಾಗುವದರೊಂದಿಗೆ ಕುಶಾಲನಗರ ಕೊಪ್ಪ ಬಳಿ ಕೊಡಗು-ಮೈಸೂರು ಸಂಪರ್ಕ ಕಲ್ಪಿಸುವ ಕಾವೇರಿ ನದಿಯ ನೂತನ ಸೇತುವೆ ಕೂಡ ಬಿರುಕು ಬಿಟ್ಟಿರುವ ದೃಶ್ಯ ಗೋಚರಿಸಿದೆ.
ಕಾವೇರಿ ನದಿಯಲ್ಲಿ ಹರಿದು ಬಂದ ನೀರು 3 ದಿನಗಳ ಕಾಲ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಸಂದರ್ಭ; ನೀರಿನ ರಭಸಕ್ಕೆ ಸೇತುವೆಯ ಪಿಲ್ಲರ್‍ನ ಬಲಪಾಶ್ರ್ವದ ತಳಪಾಯ ಬಹುತೇಕ ಕುಸಿದಿದ್ದು ಅಪಾಯವನ್ನು ಆಹ್ವಾನಿಸುವಂತಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮೂಲಕ 2002 ರಲ್ಲಿ ನಿರ್ಮಾಣಗೊಂಡ ಈ ಸೇತುವೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ 88.3 ಕಿಮೀ ವ್ಯಾಪ್ತಿಯಲ್ಲಿದ್ದು
(ಮೊದಲ ಪುಟದಿಂದ) ಭಾರೀ ಪ್ರಮಾಣದ ಭಾರ ಹೊತ್ತ ವಾಹನಗಳು ನಿತ್ಯ ಸಂಚರಿಸುತ್ತಿವೆ.
20 ಮೀ. ಉದ್ದದ 6 ಕಮಾನುಗಳನ್ನು ಈ ಸೇತುವೆಗೆ ಅಳವಡಿಸಲಾಗಿದ್ದು ಈ ಬಾರಿ ಗರಿಷ್ಠ ನದಿ ನೀರು ಹರಿದ ಹಿನ್ನಲೆಯಲ್ಲಿ ರಸ್ತೆ ಬದಿಯ ತಡೆಗೋಡೆ ಕುಸಿದಿರುವ ದೃಶ್ಯ ಗೋಚರಿಸತೊಡಗಿದೆ. ಇದರೊಂದಿಗೆ ಸೇತುವೆಯ ಒಂದು ತುದಿ ಭಾಗದ ಕಮಾನು ವ್ಯಾಪ್ತಿಯಲ್ಲಿ; ಕೆಲವೇ ಅಂತರದಲ್ಲಿ ತಡೆಗೋಡೆ ಕುಸಿದು ಮುಂದಿನ ದಿನಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಕಂಡುಬಂದಿದೆ. ನದಿಯ ಇಕ್ಕೆಲಗಳಲ್ಲಿ ಅಕ್ರಮವಾಗಿ ಮಣ್ಣು ತುಂಬಿಸುವದ ರೊಂದಿಗೆ ವಾಣಿಜ್ಯ ಚಟುವಟಿಕೆಗಳನ್ನು ನದಿ ತಟಗಳಲ್ಲಿ ಪ್ರಾರಂಭಿಸಲು ಸ್ಥಳೀಯ ಪಂಚಾಯ್ತಿಗಳು ನಿಯಮಬಾಹಿರವಾಗಿ ಅನುಮತಿ ನೀಡುತ್ತಿರುವ ಬೆಳವಣಿಗೆಗಳು ಅಧಿಕವಾಗಿವೆ. ಹಲವೆಡೆ ನದಿಯ ಅಗಲ ಕಿರಿದಾಗಿದ್ದು ಇದರಿಂದ ನದಿಯಲ್ಲಿ ನೀರು ಸರಾಗವಾಗಿ ಹರಿಯಲು ಆಗದೆ ನದಿ ನೀರಿನ ಮಾರ್ಗವನ್ನು ಬದಲಾಯಿಸುತ್ತಿರು ವದು ಇತ್ತೀಚಿನ ಬೆಳವಣಿಗೆಯಾಗಿದೆ.
ಇನ್ನೊಂದೆಡೆ ಕಾವೇರಿ ಪ್ರತಿಮೆ ಬಳಿ ನದಿಗೆ ನಿರ್ಮಾಣಗೊಂಡ ಮೆಟ್ಟಿಲುಗಳ ಬಳಿ ಪುರಾತನ ಹಳೆಯ ಸೇತುವೆಯ ತಡೆಗೋಡೆಯಲ್ಲಿ ಕೂಡ ಬಿರುಕುಗಳು ಮೂಡಿವೆ. ಸೇತುವೆಯು ಕುಶಾಲನಗರ ಮತ್ತು ಕೊಪ್ಪ ವ್ಯಾಪ್ತಿಯ ನದಿ ತಟದಲ್ಲಿ ಹೇರಳವಾಗಿ ಬೃಹತ್ ಕಲ್ಲು ಮಣ್ಣುಗಳನ್ನು ತುಂಬುವದ ರೊಂದಿಗೆ; ನದಿ ನೀರಿನ ಹರಿವಿಗೆ ಅಡ್ಡಿಯುಂಟು ಮಾಡಿರುವದು ಕೂಡ ಈ ಬಾರಿ ನೀರಿನ ಸ್ವಾಭಾವಿಕ ಹರಿವಿಗೆ ತೊಂದರೆ ಉಂಟಾಗಿರುವಂತಿದೆ. ಪರಿಣಾಮ ರಸ್ತೆ ಮೇಲೆ ಇತ್ತೀಚೆಗೆ ಪ್ರವಾಹದ ನೀರು ಹರಿಯಲು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಹೆದ್ದಾರಿ ಸಂಚಾರ 3 ದಿನಗಳ ಕಾಲ ಸ್ಥಗಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಕ್ರಮವಾಗಿ ತುಂಬಿದ ಕಲ್ಲು ಮಣ್ಣು ತೆರವುಗೊಳಿಸುವಂತೆ ಸಾರ್ವಜನಿಕರು ಸಂಬಂಧಿಸಿದ ಆಡಳಿತ ಅಧಿಕಾರಿಗಳನ್ನು ಒತ್ತಾಯಿಸಿ ದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಅನಾಹುತಗಳು ಮರುಕಳಿಸದಂತೆ ನದಿ ಅಗಲೀಕರಣ ಮತ್ತು ಹೂಳೆತ್ತುವ ಕಾರ್ಯಕ್ಕೆ ಕ್ರಿಯಾಯೋಜನೆ ರೂಪಿಸುವಂತೆ ಆಗ್ರಹಿಸಿದ್ದಾರೆ. ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ನದಿಯ ಎರಡೂ ಬದಿಯ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ. ರಾಜ್ಯ ಸಚಿವ ಸುರೇಶ್ ಕುಮಾರ್ ಕೂಡ ನದಿ ತಟಗಳನ್ನು ಪರಿಶೀಲಿಸಿದ್ದು ನದಿ ತಟದಲ್ಲಿರುವ ಮನೆಗಳು, ವಾಣಿಜ್ಯ ಕೇಂದ್ರಗಳನ್ನು ಶಾಶ್ವತವಾಗಿ ತೆರವುಗೊಳಿಸುವ ಕ್ರಮಕ್ಕೆ ಸರಕಾರ ಕಾರ್ಯಕ್ರಮ ರೂಪಿಸಲಿದೆ ಎಂದಿದ್ದಾರೆ.
ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಈ ಬಗ್ಗೆ ಕೂಡಲೆ ಕುಶಾಲನಗರ ಕೊಪ್ಪ ಬಳಿ ಕಾವೇರಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಈ ಸೇತುವೆ ಬಗ್ಗೆ ಪರಿಶೀಲನೆ ನಡೆಸಿ ಮುಂದೆ ಉಂಟಾಗಲಿರುವ ಅನಾಹುತವನ್ನು ತಪ್ಪಿಸಬೇಕಾಗಿದೆ.
-ಚಿತ್ರ, ವರದಿ : ಚಂದ್ರಮೋಹನ್