ಮಡಿಕೇರಿ, ಆ. 25: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಶ್ರೀ ಕಂಚಿಕಾಮಾಕ್ಷಿ ದೇವಾಲಯದಲ್ಲಿ ಮೊಸರು ಕುಡಿಕೆ ಹಾಗೂ ಐದು ವರ್ಷದೊಳಗಿನ ಮಕ್ಕಳಿಗೆ ಶ್ರೀ ಕೃಷ್ಣ-ರಾಧೆ ಛದ್ಮವೇಷ ಸ್ಪರ್ಧೆ ನಡೆಯಿತು.ಇಸ್ಕಾನ್: ಮಡಿಕೇರಿ ಕಾಲೇಜು ರಸ್ತೆಯ ಇಸ್ಕಾನ್ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮರು ದಿನವಾದ ಇಂದು ಶ್ರೀಚೈತನ್ಯ ಪ್ರಭು ದಯಾಳ್ ಅವರ ಜನ್ಮೋತ್ಸವದೊಂದಿಗೆ ನಂದೋತ್ಸವವನ್ನು ಆಚರಿಸಲಾಯಿತು. ಈ ಪ್ರಯುಕ್ತ ಭಜನೆ, ಶ್ರೀ ಕೃಷ್ಣ, ಬಲರಾಮ, ಸೌಭದ್ರೆಗೆ ವಿಶೇಷ ಪೂಜೆ ಬಳಿಕ ಪ್ರಭು ಪಾದರಿಗೆ ಅಭಿಷೇಕ, ಅರ್ಚನೆ ಸೇವೆಯೊಂದಿಗೆ ಮಹಾಆರತಿ ಬಳಿಕ ಪ್ರಸಾದ ವಿತರಿಸಲಾಯಿತು. ಮಂದಿರದ ಸದ್ಭಕ್ತರು ತಮ್ಮ ಅನುಭವಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.ವಿಜಯ ಚೈತನ್ಯ ಪ್ರಭು, ರತ್ನಕರ ಪ್ರಭು, ಶಿವ ಚೈತನ್ಯ ಪ್ರಭು, ಭಕ್ತೆ ಚೈತನ್ಯ ಸ್ಮಿತಾ ಮೊದಲಾದವರು ಅನಿಸಿಕೆ ಹಂಚಿಕೊಂಡರು.ಸೋಮವಾರಪೇಟೆ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ
(ಮೊದಲ ಪುಟದಿಂದ) ಇಲ್ಲಿನ ಕಸಾಪ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಶ್ರೀಕೃಷ್ಣ ಛದ್ಮವೇಶ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ದೊಂದಿಗೆ ಸಮ್ಮಿಲನಗೊಂಡಿರುವ ಹಬ್ಬಾಚರಣೆಗಳನ್ನು ಸಾಮೂಹಿಕವಾಗಿ ಆಚರಿಸುವದ ರಿಂದ ಸಂಭ್ರಮ ಹೆಚ್ಚುತ್ತದೆ ಎಂದರು.
ಇದೇ ಪ್ರಥಮ ಬಾರಿಗೆ ಶ್ರೀಕೃಷ್ಣನ ಛದ್ಮವೇಶ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 1 ರಿಂದ 3 ಮತ್ತು 4 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಗುವದು ಎಂದರು.
ಈ ಸಂದರ್ಭ ಕಸಾಪ ಕಾರ್ಯದರ್ಶಿ ಕೆ.ಎ. ಆದಂ, ಖಜಾಂಚಿ ಎ.ಪಿ. ವೀರರಾಜು, ಮಾಜೀ ಅಧ್ಯಕ್ಷ ಜವರಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ, ತೀರ್ಪುಗಾರರಾದ ಡಾ. ಸಚಿನ್, ಶಿಕ್ಷಕರಾದ ಸತೀಶ್, ರಜಿತ್ ಅವರುಗಳು ಉಪಸ್ಥಿತರಿದ್ದರು.
ಕುಶಾಲನಗರ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶ್ವ ಹಿಂದು ಪರಿಷತ್, ಭಜರಂಗದಳ ಆಶ್ರಯದಲ್ಲಿ ಕುಶಾಲನಗರದಲ್ಲಿ ಗೋಕುಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜಿಎಂಪಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಧಾ ಮತ್ತು ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆ, ಯುವಕರಿಗೆ ಹನುಮಾನ್ ಕಬಡ್ಡಿ ಪಂದ್ಯಾಟ, ಸಾರ್ವಜನಿರಿಗೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯಿತು.
ಗೋಕುಲೋತ್ಸವ ಆಚರಣಾ ಸಮಿತಿ, ಕುಶಾಲನಗರ ಭಜನಾ ಮಂಡಳಿ, ಕಾವೇರಿ ಕಲಾ ಪರಿಷತ್, ರೋಟರಿ ಸಂಸ್ಥೆ ಆರ್ಯವೈಶ್ಯ ಮಹಿಳಾ ಮಂಡಳಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವಕರ ಹಲವು ತಂಡಗಳು ಪಾಲ್ಗೊಂಡಿದ್ದವು.
ಒಡೆಯನಪುರ: ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಎಸ್.ಕೆ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಚಿಣ್ಣರಿಗಾಗಿ ಬಾಲ ಕೃಷ್ಣನ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತು.
ಕೊಡ್ಲಿಪೇಟೆ: ಕೊಡ್ಲಿಪೇಟೆಯ ನಾಮದೇವ ಸಿಂಪಿ ಸಮಾಜದ ವತಿಯಿಂದ ರುಕ್ಮಿಣಿ-ಪಾಂಡುರಂಗ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಶ್ರದ್ಧಾಭಕ್ತಿಯಿಂದ ಜರುಗಿತು.
ಅಷ್ಟಮಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಮಹಾ ಮಂಗಳಾರತಿ ಬಳಿಕ ಮಹಿಳೆಯರು ಪಾಂಡುರಂಗ ಮೂರ್ತಿಯನ್ನು ಅಲಂಕೃತ ತೊಟ್ಟಿಲಲ್ಲಿರಿಸಿ ತೂಗಿ ಸಂಭ್ರಮಿಸಿದರು. ಯುವಕರು ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಶ್ರೀನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಮೋಹನ್ ಕುಮಾರ್ ಕೋಳೆಕರ್, ಉಪಾಧ್ಯಕ್ಷ ವಾಸುದೇವರಾವ್, ಕಾರ್ಯದರ್ಶಿ ಕಾಂತರಾಜ್, ನಿರ್ದೇಶಕರಾದ ಕೆ.ಎನ್. ರಮೇಶ್, ಅರವಿಂದ್, ಸತೀಶ್, ಸಂಜಯ್ ಇತರರು ಹಾಜರಿದ್ದರು.
ಶನಿವಾರಸಂತೆ: ಬ್ರೈಟ್ ಅಕಾಡೆಮಿ ಹೇಮಾ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷೆ ಹೇಮಾ ಕಾರ್ಯಕ್ರಮ ಉದ್ಘಾಟಿಸಿದರು. ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ಎಲ್ಲಾ ವಿದ್ಯಾರ್ಥಿಗಳು ಬಾಲಕೃಷ್ಣ-ರಾಧೆಯ ವೇಷ ಧರಿಸಿ ಕಂಗೊಳಿಸಿದರು. ಶಿಕ್ಷಕಿಯರು ಪುಟ್ಟ ಮಕ್ಕಳನ್ನು ಅಲಂಕೃತ ತೊಟ್ಟಿಲಲ್ಲಿ ಮಲಗಿಸಿ ತೂಗಿ ಸಂಭ್ರಮಿಸಿದರು. ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು, ಪೋಷಕರು ಹಾಗೂ ಶಿಕ್ಷಕರು ಹಾಜರಿದ್ದರು.