*ಗೋಣಿಕೊಪ್ಪಲು: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕ, ಕೊಡಗು ದಂತ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸಂಯುಕ್ತ ಆಶ್ರಯದಲ್ಲಿ ನೆರೆ ಸಂತ್ರಸ್ತರ ಕೇಂದ್ರಗಳಿಗೆ ತೆರಳಿ ತಿಂಡಿ ತಿನಿಸುಗಳು ಮತ್ತು ವಸ್ತ್ರಗಳನ್ನು ವಿತರಿಸಲಾಯಿತು.

ಕರಡಿಗೋಡು ಮತ್ತು ಗೋಣಿಕೊಪ್ಪಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿರುವ ಸಂತ್ರಸ್ತರನ್ನು ಭೇಟಿ ಮಾಡಿದ ಸ್ವಯಂಸೇವಕರು ಅವರ ನೋವುಗಳನ್ನು ಆಲಿಸಿ ಸಾಂತ್ವನ ಹೇಳಿದರು. ಈ ಸಂದರ್ಭ ಡಾ. ಆನಂದ್, ಲೋಕೇಶ್, ಎನ್.ಸಿ.ಸಿ. ಅಧಿಕಾರಿ ಅಕ್ರಮ್, ಎನ್.ಸಿ.ಸಿ. ನಾಯಕರುಗಳಾದ ನಿಖೇಶ್, ರಜೀತ್, ಅಶ್ವಿನ್, ದೀಪಕ್ ಮತ್ತು ದಂತ ಮಹಾವಿದ್ಯಾಲಯದ 25 ಸ್ವಯಂಸೇವಕರು, ಎನ್ï.ಸಿ.ಸಿ. ಘಟಕದ ಕೆಡೆಟ್‍ಗಳು ಹಾಜರಿದ್ದರು.

ಮಡಿಕೇರಿ: ಕಳೆದ ಬಾರಿಯಂತೆ ಈ ಬಾರಿಯೂ ಕೊಡಗಿನಲ್ಲಿ ಮಹಾ ಮಳೆಯಿಂದ ಉಂಟಾದ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಕುಸಿತ ಮತ್ತು ಪ್ರವಾಹದಿಂದ ಕೊಡಗಿನಲ್ಲಾದ ಸಮಸ್ಯೆಗಳನ್ನು ಸುಳ್ಯದ ಕೆವಿಜಿ ಕಾನೂನು ವಿದ್ಯಾ ಸಂಸ್ಥೆ ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ನೆರವನ್ನು ನೀಡಿದೆ. ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಸಂಸ್ಥೆಯ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಕೆವಿಜಿ ಕಾನೂನು ವಿದ್ಯಾಸಂಸ್ಥೆ ಮತ್ತು ರೋಟರಾಕ್ಟ್ ಸಂಸ್ಥೆಯ ತಂಡ ಗುಡ್ಡೆಹೊಸೂರು ಸಮೀಪದ ತೆಪ್ಪದ ಕಂಡಿ, ನೆಲ್ಲಿಹುದಿಕೇರಿಯ ಮುತ್ತಪ್ಪ ದೇವಾಲಯ, ಶಾದಿ ಮಹಲ್, ಮರಗೋಡು ಭಾರತಿ ವಿದ್ಯಾ ಸಂಸ್ಥೆಗೆ ಭೇಟಿ ನೀಡಿ ಅಗತ್ಯವಿದ್ದ ಸ್ಯಾನಿಟರಿ ಐಟಂ, ನ್ಯಾಫ್ಕಿನ್ಸ್, ಅಕ್ಕಿ, ಪಶು ಆಹಾರ, ಔಷಧಿ ಸಾಮಗ್ರಿ, ಟೇಬಲ್ ಟಾರ್ಚ್, ಮಕ್ಕಳಿಗೆ ಸ್ವೆಟರ್, ಟೋಪಿ ಮತ್ತು ಆಹಾರ ಸಾಮಗ್ರಿಗಳನ್ನು ನೇರವಾಗಿ ಸಂತ್ರಸ್ತರಿಗೆ ವಿತರಿಸಿತು. ಅಲ್ಲದೆ ಅಲ್ಲಿದ್ದವರ ಆರೋಗ್ಯದ ಬಗ್ಗೆಯೂ ಕಾಳಜಿ ತೋರಲಾಯಿತು.ನಂತರ ತೀವ್ರ ಹಾನಿಗೊಳಗಾದ ಕಟ್ಟೆಮಾಡು ಗ್ರಾಮಕ್ಕೂ ಭೇಟಿ ನೀಡಿ, ಮನೆಗಳ ವಾಸ್ತವ ಸ್ಥಿತಿಗತಿಯನ್ನು ಪರಿಶೀಲಿಸಿದ ತಂಡ ಸಂತ್ರಸ್ತರಿಗೆ ಧೈರ್ಯ ತುಂಬಿತು. ಕೆವಿಜಿ ಕಾನೂನು ವಿದ್ಯಾ ಸಂಸ್ಥೆಯ ರೋಟರಾಕ್ಟ್ ವಿಭಾಗದ ಸ್ಥಾಪಕ ಕೌಶಿಕ್, ಕೆವಿಜಿ ವಿದ್ಯಾರ್ಥಿಗಳು ಹಾಗೂ ಪ್ರಮುಖರು ಈ ಸಂದರ್ಭ ಹಾಜರಿದ್ದರು.

ಚೆಟ್ಟಳ್ಳಿ: ಮಹಾ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ ಮೈಸೂರು ಜಮಾಯತ್ ಉಲಮಾ ವತಿಯಿಂದ ಕೊಡಗು ಸಂತ್ರಸ್ತರಿಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು. ಕಾವೇರಿ ನದಿ ದಡ ಗ್ರಾಮಗಳಾದ ಸಿದ್ದಾಪುರ, ನೆಲ್ಲಿಹುದಿಕೇರಿ, ಕೊಂಡಂಗೇರಿ ಸೇರಿದಂತೆ ಹಲವು ಗ್ರಾಮಗಳ ಸಂತ್ರಸ್ತರಿಗೆ ಲಕ್ಷಾಂತರ ವೆಚ್ಚದ ಹಾಸಿಗೆ, ದಿಂಬು, ಬಟ್ಟೆ, ಪಾತ್ರೆ ಹಾಗೂ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಣೆ ಮಾಡಲಾಯಿತು

ಕೇರಳದಲ್ಲೂ ಹಲವೆಡೆ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಕಿಟ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಫೀಜ್ ಅರ್ಷದ್ ಸಾಬ್ ತಿಳಿಸಿದರು

ಈ ಸಂದರ್ಭ ಸಮಿತಿಯ ಪ್ರಮುಖರಾದ ಮೌಲಾನ ಅಪ್ಸರ್, ಜುಬೇರ್, ಕರೀಂ, ನಿಜಾಮುದ್ದೀನ್, ಹಾರೂನ್ ಮತ್ತಿತರರು ಹಾಜರಿದ್ದರು.

ನಾಪೋಕ್ಲು: ಸಮೀಪದ ಎಮ್ಮೆಮಾಡು ಗ್ರಾಮದ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ಕನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ಮಳೆ ಸಂದರ್ಭದಲ್ಲಿ ಹಾನಿಗೊಳಗಾದವರು ಯಾರಾದರೂ ಇದ್ದಲ್ಲಿ ಮನೆ ಹಾನಿಯ ವರದಿಯನ್ನು ಕೂಡಲೇ ಗ್ರಾಮ ಲೆಕ್ಕಿಗರಿಗೆ ತಲಪಿಸುವಂತೆ ಸೂಚಿಸಿದರು. ಸ್ಥಳೀಯ ಮುಖಂಡರು ಹಾಜರಿದ್ದರು.ಗೋಣಿಕೊಪ್ಪಲು: ಮಹಾಮಳೆಗೆ ತುತ್ತಾದ ಸಂತ್ರಸ್ತರ ನೆರವಿಗೆ ಧಾವಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕ ನೆರೆ ಸಂತ್ರಸ್ತರ ಮಾಹಿತಿಗಳನ್ನು ಪಡೆದು ಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಮೂಲಕ ನೊಂದವರ ಕಷ್ಟದಲ್ಲಿ ಭಾಗಿಯಾದರು. ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ತೋರ ಗ್ರಾಮ ಸೇರಿದಂತೆ ದಕ್ಷಿಣ ಕೊಡಗಿನ ವಿವಿಧ ಭಾಗಗಳಿಗೆ ತೆರಳಿದ ರೈತ ಸಂಘದ ಪದಾಧಿಕಾರಿಗಳು ಅರ್ಹ ಕುಟುಂಬಗಳಿಗೆ ರಾಜ್ಯದ ವಿವಿಧ ಭಾಗದಿಂದ ರೈತರು ನೀಡಿದ ಆಹಾರ ಧಾನ್ಯಗಳನ್ನು ವಿತರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಚಾಮರಾಜನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ರಾಜ್ಯ ಸಂಘಟನ ಕಾರ್ಯದರ್ಶಿ ಮಹೇಶ್ ಪ್ರಭು ಆಲೂರು ಅವರ ಸಮ್ಮುಖದಲ್ಲಿ ಮಹಾಮಳೆಗೆ ಸಿಲುಕಿ ಸಂತ್ರಸ್ತಗೊಂಡ ಕೆದಮುಳ್ಳೂರು ಗ್ರಾಮದ ತೋರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸುವದರೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು. ಚಾಮರಾಜ ಜಿಲ್ಲೆಯ ರೈತರು ತಂದಿದ್ದ ಅಕ್ಕಿ, ಬೇಳೆ, ಬಟ್ಟೆ, ಚಾಪೆ ಸೇರಿದಂತೆ ಆಹಾರ ಪದಾರ್ಥಗಳನ್ನು ಸಂತ್ರಸ್ತರಿಗೆ ಈ ಸಂದರ್ಭ ವಿತರಿಸಲಾಯಿತು.

ಇದೆ ಸಂದರ್ಭ ದಕ್ಷಿಣ ಕೊಡಗಿನ ವಿವಿಧ ಭಾಗಗಳಾದ ಕಿರುಗೂರು, ನಲ್ಲೂರು, ಬಾಳೆಲೆ, ಶ್ರೀಮಂಗಲ, ತೆರಾಲು, ಬಿರುನಾಣಿ ಭಾಗಗಳಲ್ಲಿ ಮಳೆಯ ಹಾನಿಯಿಂದ ತೊಂದರೆಗೀಡಾದ ರೈತ ಕುಟುಂಬಗಳಿಗೆ ಆಯಾಯ ಭಾಗದ ರೈತ ಮುಖಂಡರು ಮನೆ ಮನೆಗೆ ತೆರಳಿ ಅಕ್ಕಿ, ದವಸ ಧಾನ್ಯಗಳ ಕಿಟ್‍ನ್ನು ವಿತರಿಸಿದರು.

ತೋರ ಗ್ರಾಮದಲ್ಲಿ ಸಂಭವಿಸಿರುವ ಅನಾಹುತದ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ರಾಜ್ಯ ಸಂಘಟನ ಕಾರ್ಯದರ್ಶಿ ಮಹೇಶ್ ಪ್ರಭು ಆಲೂರು ಅವರು ಸ್ಥಳದಲ್ಲಿದ್ದ ಎನ್‍ಡಿಆರ್‍ಎಫ್ ಮುಖ್ಯಸ್ಥ ಕಾರ್ಯಪ್ಪ ಅವರೊಂದಿಗೆ ಮಾತನಾಡಿ, ಕಾರ್ಯಾಚರಣೆ ವಿವರ ಪಡೆದರು. ಈ ಸಂದರ್ಭ ಕೊಡಗು ಜಿಲ್ಲೆಯ ರೈತ ಸಂಘದ ಪದಾಧಿಕಾರಿಗಳಾದ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಟಿ. ಶೆಟ್ಟಿಗೇರಿಯ ಕಂಬ ಕಾರ್ಯಪ್ಪ, ತೆರಾಲುವಿನ ಬೊಟ್ಟಂಗಡ ತಿಲಕ್, ನಲ್ಲೂರಿನ ತೀತರಮಾಡ ರಾಜ, ಮಲ್ಚಿರ ಅಶೋಕ್, ಗಿರೀಶ್, ಎಂ.ಬಿ. ಹರೀಶ್, ಕೋದೆಂಗಡ ಬೆನ್ಸ್‍ನ್, ಎಂ.ಬಿ. ಅಶೋಕ್, ಚಾಮರಾಜ ಜಿಲ್ಲೆಯ ಪದಾಧಿಕಾರಿಗಳಾದ ಎಸ್. ಮಹದೇವಪ್ಪ, ಶಿವಮಲ್ಲು, ಜಿ.ಪಿ. ಸ್ವಾಮಿ, ಸುರೇಶ್, ಮನು, ಪುಟ್ಟಸ್ವಾಮಿ, ರಮೇಶ್, ಗುರುಸಿದ್ದಯ್ಯ, ಮಂಜುಗೌಡ, ಮಾದಪ್ಪ, ಮಂಜುನಾಥ್ ಮುಂತಾದವರು ಹಾಜರಿದ್ದರು. - ಹೆಚ್.ಕೆ. ಜಗದೀಶ್

ಗುಡ್ಡೆಹೊಸೂರು: ಬೆಂಗಳೂರಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ ಸದಸ್ಯರು ಸಂಗ್ರಹಿಸಿದ ಒಟ್ಟು ರೂ. 5 ಲಕ್ಷಗಳ ಸಾಮಗ್ರಿಗಳನ್ನು ಸೋಮವಾರಪೇಟೆ ತಾಲೂಕಿನ ವಿವಿಧ ಭಾಗಗಳ ನಿರಾಶ್ರಿತರಿಗೆ ವಿತರಿಸಲಾಯಿತು.

ಮರಗೋಡು, ಸುಂಟಿಕೊಪ್ಪ, ಗುಡ್ಡೆಹೊಸೂರಿನ ತೆಪ್ಪದಕಂಡಿ ಹಾಗೂ ಮಾದಾಪಟ್ಟಣದ ನಿರಾಶ್ರಿತರಿಗೆ ವಿತರಿಸಲಾಯಿತು. ಬೆಂಗಳೂರಿನಿಂದ ತಂದ ಸಾಮಗ್ರಿಗಳನ್ನು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ವಹಿಸಿದ್ದು, ಶಾಸಕರ ಸಹಾಯಕ ರವಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಮೂಲತಃ ಸೋಮವಾರಪೇಟೆಯವರಾದ ಬೆಂಗಳೂರಿನ ವಿನೋದ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿ ತರಲಾಗಿತ್ತು. ಬೆಂಗಳೂರಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಗುಡ್ಡೆಹೊಸೂರಿನ ಬಿ.ಜೆ.ಪಿ. ಪ್ರಮುಖ ಎಂ.ಆರ್. ಉತ್ತಪ್ಪ ಮತ್ತು ಗ್ರಾ.ಪಂ. ಸದಸ್ಯೆ ಪಾರ್ವತಿ ಸಿ.ಕೆ., ಗಣೇಶ್ ಹಾಜರಿದ್ದರು. - ಗಣೇಶ್ ಕುಡೆಕ್ಕಲ್.

ವೀರಾಜಪೇಟೆ ಹಸಿರು ಸೇನೆ: ವೀರಾಜಪೇಟೆ-ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ ಗ್ರಾಮವು ಸೇರಿದಂತೆ ನೆರೆಪೀಡಿತ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲೆ ಮತ್ತು ಬೆಂಗಳೂರು ಜಿಲ್ಲಾ ನಗರ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ನೆರೆಪೀಡಿತ ಸಂತ್ರಸ್ತ ಕುಟುಂಬಗಳಿಗೆ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಭೂ ಕುಸಿತ ಸಂಭವಿಸಿದ ಘಟನೆಯ ಹಿನ್ನೆಲೆ ಸಂತ್ರಸ್ತ ಕುಟುಂಬಗಳು ಸ್ಥಳೀಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಮಳೆ ಇಳಿಮುಖವಾದಂತೆ ತಮ್ಮ ಮನೆಗೆ ತೆರಳಿದ ಸಂತ್ರಸ್ತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ತಮ್ಮ ಉದಾರತೆಯನ್ನು ಮೆರೆದರು.

ಈ ಸಂದರ್ಭ ಭಾರತೀಯ ಕಾರ್ಯನಿರತ ಪ್ರರ್ತಕರ್ತರ ಒಕ್ಕೂಟ ದೆಹಲಿ ಸಂಸ್ಥೆಯ ಕಾರ್ಯದರ್ಶಿ ಕೆ. ಶಾಂತಕುಮಾರಿ ಮಾತನಾಡಿ, ರಾಜ್ಯವು ಇಂದು ನೆರೆಹಾವಳಿಯಿಂದ ತತ್ತರಿಸಿದೆ ರಾಜ್ಯಕ್ಕೆ ನೀರು ಉಣಿಸುವ ಕಾವೇರಿ ನದಿ ಉಗಮವಾದ ಕೊಡಗು ಜಿಲ್ಲೆಯು ಮಹಾಮಳೆಗೆ ತುತ್ತಾಗಿದ್ದು ಇಲ್ಲಿಯ ಜನತೆಯು ಸಂಕಷ್ಟವನ್ನು ಎದುರಿಸುತ್ತಿದ್ದರೆ ಜನತೆಯ ದುಃಖದಲ್ಲಿ ತಮ್ಮಲ್ಲಾದ ಸಹಾಯ ಇದಾಗಿದೆ. ಸಂತ್ರಸ್ತರು ದುಖ:ದುಮ್ಮಾನಗಳನ್ನು ಬದಿಗೊತ್ತಿ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಕೊಡಗಿನ ನೆರೆಪೀಡಿತ ಪ್ರದೇಶಗಳಿಗೆ ರಾಜ್ಯದ ವಿವಿಧ ಮೂಲೆಗಳಿಂದ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸಂಘ-ಸಂಸ್ಥೆಗಳು ಮುಂದು ಬರುಬರುತ್ತಿರುವದು ಸಂತೋಷದಾಯಕವಾದ ವಿಷಯವಾಗಿದೆ. ಮುಂದೆಯೂ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸಂಘ-ಸಂಸ್ಥೆಗಳು ಮುಂದೆಬರಬೇಕು. ಕೊಡಗಿನ ರೈತಾಪಿ ವರ್ಗದ ಮತ್ತು ಕೊಡಗಿನ ಜನತೆಯ ಪರವಾಗಿ ಧನ್ಯವಾದ ಸಮರ್ಪಣೆ ಮಾಡುವದಾಗಿ ಹೇಳಿದರು.

ಸುಮಾರು 200 ಕುಟುಂಬಗಳಿಗೆ ದಿನಬಳಕೆಯ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು ಮತ್ತು ಕೆಲವು ಔಷಧಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚೆಂಗಪ್ಪ, ಸಂಚಾಲಕ ಪುಚ್ಚಿಮಾಡ ಸುಭಾಶ್, ಪೊನ್ನಂಪೇಟೆ ಸಂಚಾಲಕ ಅಲೇಮಾಡ ಮಂಜುನಾಥ್, ತೆರಾಲು ವಿಭಾಗದ ಬೊಟ್ಟಂಗಡ ತಿಲಕ್, ಕಾಂಡೇರ ಮುತ್ತಪ್ಪ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ವಿಭಾಗದ ಡಾ. ಅಪೂರ್ವ, ಸಂಸ್ಥೆಯ ಸದಸ್ಯರು ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಹಾಜರಿದ್ದರು. - ಕೆ.ಕೆ.ಎಸ್.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಹಿನ್ನೆಲೆ ಸಂತ್ರಸ್ತರಾದವರಿಗೆ ಕೊಡಗು ಹೆಗ್ಗಡೆ ಸಮಾಜ ಸ್ಪಂದಿಸಿದೆ. ಸಮಾಜದ ಮೂಲಕ ರೂ. 50 ಸಾವಿರ ಮೊತ್ತವನ್ನು ನೊಂದವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಪ್ರಾಕೃತಿಕ ಪರಿಹಾರ ವಿಕೋಪ ನಿಧಿಗೆ ಪ್ರಮುಖರು ನೀಡಿದ್ದಾರೆ.

ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿದ ಸಮಾಜದ ಅಧ್ಯಕ್ಷ ಪಿ.ಜಿ. ಅಯ್ಯಪ್ಪ, ಉಪಾಧ್ಯಕ್ಷ ಸರಾ ಚಂಗಪ್ಪ, ಕಾರ್ಯದರ್ಶಿ ಕಟ್ಟಿ ಕಾವೇರಪ್ಪ, ನಿರ್ದೇಶಕರುಗಳಾದ ಅಪ್ಪುಣ್ಣು ಪೂವಯ್ಯ, ಪಟ್ಟು ಪಳಂಗಪ್ಪ ಅವರುಗಳು ಮೊತ್ತವನ್ನು ಹಸ್ತಾಂತರಿಸಿದರು.