ಮಡಿಕೇರಿ, ಆ. 24: ನದಿ ರಕ್ಷಣೆಯ ಆಂದೋಲನದ ರೀತಿಯಲ್ಲೇ ಕಾವೇರಿ ನದಿಯನ್ನು ಸಂರಕ್ಷಿಸುವ ‘ಕಾವೇರಿ ಕೂಗು’ ಆಂದೋಲನಕ್ಕೆ ಕೊಯಮತ್ತೂರು ಈಶ ಫೌಂಡೇಶನ್‍ನ ಸಂಸ್ಥಾಪಕ ಹಾಗೂ ಚಿಂತಕ ಜಗ್ಗಿ ವಾಸುದೇವ್ ಅವರು ಸೆಪ್ಟೆಂಬರ್ 3 ರಂದು ತಲಕಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ.ಅಂದು ಬೆಳಿಗ್ಗೆ 11 ಗಂಟೆಗೆ ತಲಕಾವೇರಿಯಲ್ಲಿ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಸದ್ಗುರು ಅವರು ತಾವೇ ಬೈಕ್ ಚಾಲಿಸಲಿದ್ದಾರೆ. ಅವರ ಜೊತೆಯಲ್ಲಿ ಸುಮಾರು 25 ಮಂದಿಯ ಬೈಕ್ ತಂಡ ತಲಕಾವೇರಿಯಿಂದ ಪೂಂಪುಹಾರ್‍ವರೆಗೆ ಪ್ರಯಾಣ ಬೆಳಸಲಿದ್ದಾರೆ.ಕಳೆದ 50 ವರ್ಷಗಳಲ್ಲಿ ಕಾವೇರಿ ನದಿ ಶೇ. 40 ರಷ್ಟು ಪ್ರಮಾಣದಲ್ಲಿ ನೀರನ್ನು ಕಳೆದುಕೊಂಡಿದ್ದು, ನದಿ ನಾಶವಾಗದಂತೆ ತಡೆಯಲು ಕಾವೇರಿ ಪ್ರದೇಶಗಳಲ್ಲಿ ರೈತರು ಮರಗಳನ್ನು ನೆಡುವಂತೆ ಪ್ರೇರೇಪಿಸಲು ‘ಕಾವೇರಿ ಕೂಗು’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರೈತರ ಜಮೀನಿನಲ್ಲಿ ಹೆಚ್ಚು ಮರಗಳನ್ನು ನೆಟ್ಟರೆ ವರ್ಷವಿಡೀ ಕಾವೇರಿಯ ಪ್ರಮಾಣದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವದು ಇದರ ಉದ್ದೇಶವಾಗಿದೆ. ಈಗಾಗಲೇ 70 ಸಾವಿರ ರೈತರು ತಮಿಳುನಾಡಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಇದೇ ತಾ. 5 ರಂದು ಮೈಸೂರಿನಲ್ಲಿ ಅಭಿಯಾನದ ರೈತ ಸಂಪರ್ಕ ಕಾರ್ಯಕ್ರಮ ಆರಂಭಗೊಂಡಿದೆ.

ಸೆಪ್ಟೆಂಬರ್ 3 ರಂದು ತಲಕಾವೇರಿಯಲ್ಲಿ ಆರಂಭ ಗೊಳ್ಳಲಿರುವ ಬೈಕ್ ರ್ಯಾಲಿ 3 ತಿಂಗಳವರೆಗೆ ರೈತ ಜಾಗೃತಿ ಕಾರ್ಯಕ್ರಮ ನಡೆಸಲಿದೆ.