ಪೊನ್ನಂಪೇಟೆ, ಆ. 24 : ತಿತಿಮತಿ - ಹುಣಸೂರು ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸುವ ಪ್ರಸ್ತಾಪ ಸಂಪೂರ್ಣವಾಗಿ ಪರಿಸರವಾದಿಗಳೆನಿಸಿಕೊಂಡವರ ಮತ್ತು ಅವರ ಕೈಗೊಂಬೆಗಳಂತಿರುವ ಕೆಲ ಅರಣ್ಯಾಧಿಕಾರಿಗಳ ಕೃಪಾಪೋಷಿತ ಹುನ್ನಾರ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಕಿಡಿಕಾರಿದ್ದಾರೆ.ಶನಿವಾರದಂದು ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಉದ್ದೇಶಿತ ಈ ಪ್ರಸ್ತಾಪದ ಕುರಿತು ಇನ್ನೂ ತಮಗೆ ಅಧಿಕೃತವಾಗಿ ಯಾವದೇ ಮಾಹಿತಿ ಬಂದಿಲ್ಲ. ಮಾಧ್ಯಮಗಳಲ್ಲಿ ಪ್ರಕಟಗೊಂಡ ವಿಷಯವನ್ನಷ್ಟೆ ಗಮನಿಸಿದ್ದೇನೆ. ಈ ಪ್ರಸ್ತಾಪ ನಿಜವಾಗಿದ್ದರೆ ಜನಾಂದೋಲನದ ಮೂಲಕ ನ್ಯಾಯ ಪಡೆಯಲು ಮುಂದಾಗಬೇಕಾಗುತ್ತದೆ ಎಂದು ಹೇಳಿದರು. ಕೊಡಗಿನ ಕೆಲ ಪರಿಸರವಾದಿಗಳೆನಿಸಿಕೊಂಡವರು ತಿತಿಮತಿ- ಹುಣಸೂರು ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ಹಲವು ವರ್ಷಗಳಿಂದ ಷಡ್ಯಂತ್ರ ರೂಪಿಸುತ್ತಿದ್ದಾರೆ. ಹಾಗಾಗಿ ಈಗಿನ ಪ್ರಸ್ತಾಪವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ಶೀಘ್ರದಲ್ಲೆ ಪರಿಶೀಲನೆ ನಡೆಸಿ ವಾಸ್ತವಾಂಶ ಪತ್ತೆಹಚ್ಚಲಾಗುವದು. ಬಳಿಕ ಜನರ ಭಾವನೆಗಳಿಗೆ ಪೂರಕವಾಗಿ ಮುಂದುವರೆಯಲಾಗುವದು. ಯಾವದೇ ಕಾರಣಕ್ಕೂ ಈ ಪ್ರಸ್ತಾಪ ಜಾರಿಯಾಗಬಾರದು. ಜನರಿಗೆ ತೊಂದರೆಯಾಗುವ ಕೆಲಸಗಳಿಗೆ ಯಾವ ಬೆಲೆ ತೆತ್ತಾದರೂ ಅದನ್ನು ವಿರೋಧಿಸಲಾಗುವದು ಎಂದು ಬೋಪಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ತಿತಿಮತಿ- ಹುಣಸೂರು ಮುಖ್ಯ ರಸ್ತೆಯ ಎಡಬದಿಯಲ್ಲಿರುವ ದೇವಮಚ್ಚಿ ಮತ್ತು ಮಾವುಕಲ್ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶವನ್ನು ದಿಢೀರನೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವನ್ಯಜೀವಿ ವಲಯಕ್ಕೆ ಸೇರ್ಪಡೆಗೊಳಿಸಿದ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇದು ಅರಣ್ಯ ಇಲಾಖೆಯ ಕಾನೂನುಬಾಹಿರ ಕ್ರಮವಾಗಿದೆ. ಇಲ್ಲಿ ಪಾಲಿಸಬೇಕಾದ ಯಾವ ನಿಯಮಾವಳಿಯನ್ನು ಕೂಡ ಅರಣ್ಯ ಇಲಾಖೆ ಪಾಲಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕನಿಷ್ಟ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸಭೆಯ ಅನುಮೋದನೆಯನ್ನು ಕೂಡ ಪಡೆಯದೆ ಇಲಾಖೆಯ ಮೇಲ್ಮಟ್ಟದಲ್ಲಿ ಈ ಆದೇಶ ಮಾಡಲಾಗಿದೆ. ಸದಾ ಜನರಿಗೆ ವಿವಿಧ ರೀತಿಯಲ್ಲಿ ತೊಂದರೆ ನೀಡುವ ಅರಣ್ಯ ಇಲಾಖೆ ಇಲ್ಲಿಯೂ ಕೂಡ ತನ್ನ ಜನವಿರೋಧಿ ನೀತಿ ಅನುಸರಿಸಿದೆ. ಪರಿಸರವಾದಿಗಳ ಹಿಡಿತದಲ್ಲಿರುವ ಕೆಲ ಅರಣ್ಯಾಧಿಕಾರಿಗಳು ಅರಣ್ಯ ಭವನದಲ್ಲಿ ಕುಳಿತು ತಮ್ಮ ಮನಸೋ ಇಚ್ಚೆ ಆದೇಶ ನೀಡಿದರೆ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಅದನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಇವರ ಜನವಿರೋಧಿ ನೀತಿಗಳನ್ನು ಎಲ್ಲಿ ಪ್ರಶ್ನೆ ಮಾಡಬೇಕೊ ಅಲ್ಲಿ ಮಾಡುತ್ತೇನೆ ಎಂದು ನುಡಿದರು.

ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ಉಂಟಾದ ಕೆಲ ಗೊಂದಲದ ವಾತಾವರಣದಿಂದಾಗಿ ಸಚಿವರಿಗೆ ಖಾತೆ ಹಂಚಿಕೆಯಾಗಿಲ್ಲ. ಶೀಘ್ರದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅರಣ್ಯ ಖಾತೆ ವಹಿಸಿಕೊಳ್ಳುವ ಸಚಿವರಿಗೆ ಇಲ್ಲಿನ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಟ್ಟು

ಜನಜೀವನಕ್ಕೆ ಅನುಕೂಲವಾಗುವ ರೀತಿಯ ಆದೇಶ ಹೊರಡಿಸಲು ಶ್ರಮಿಸಲಾಗುವದು. ಇಲಾಖೆಯಲ್ಲಿ ಕೆಲವು ಪೂರ್ವಾಗ್ರಹಪೀಡಿತ

ಅಧಿಕಾರಿಗಳು ಜನರ ಯಜಮಾನರಂತೆ ವರ್ತಿಸುತ್ತಿದ್ದು, ಇವರ ದರ್ಪವೇ ಈ ರೀತಿಯ ಗೊಂದಲಗಳಿಗೆ ಕಾರಣವಾಗಿದೆ. ಇದಕ್ಕೆ ಕಡಿವಾಣ ಹೇರಲು ಮುಂದಾಗದಿದ್ದರೆ ಜನತೆ ಮತ್ತಷ್ಟು ಸಂಕಟ ಅನುಭವಿಸಬೇಕಾಗುತ್ತದೆ

ಎಂದು ಎಚ್ಚರಿಸಿದರು. -ರಫೀಕ್ ತೂಚಮಕೇರಿ