ಕುಶಾಲನಗರ, ಆ. 23: ಸಚಿವ ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಇದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕುಶಾಲನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ರಂಜನ್, ಸಚಿವ ಸಂಪುಟ ರಚನೆ ಸಂದರ್ಭ ಅಗತ್ಯ ಮಾನದಂಡದ ಅವಶ್ಯಕತೆಯಿದೆ. ತಾನು 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಬಾರಿ ಸಂಪುಟದಲ್ಲಿ ಕೇವಲ ಎರಡು ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಬಾಹ್ಯ ಒತ್ತಡಕ್ಕೆ ಮಣಿದು ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯಾರಿಗೆ ಸಚಿವ ಸ್ಥಾನ ನೀಡಬೇಕು, ನೀಡಬಾರದು ಎಂಬ ಸ್ಪಷ್ಟತೆ ಇರಬೇಕಿದೆ. ಎಲ್ಲಾ ರೀತಿಯ ಅರ್ಹತೆಗಳನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕಿದೆ. ತಾನು ವ್ಯಕ್ತಿಗಿಂತ ಪಕ್ಷ ನಿಷ್ಠೆ ಹೊಂದಿರುವವನಾಗಿದ್ದು ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುತ್ತೇನೆ ಎಂದರಲ್ಲದೆ, ಮುಂದಿನ ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನ ದೊರಕಲಿರುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದರು.