ಬೆಂಗಳೂರು, ಆ. 23: ಕಾಂಗ್ರೆಸ್ ನಾಯಕರು ಕೊಟ್ಟ ಹಿಂಸೆಗೆ ತಮ್ಮ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಪ್ರತಿದಿನ ಕಣ್ಣೀರು ಹಾಕುತ್ತಿದ್ದರು, ತಾವು ಮಗನ ಸಂಕಟ, ನೋವನ್ನು ನುಂಗಿಕೊಂಡು ಪ್ರತಿದಿನ ಊಟ ಮಾಡಬೇಕಾದ ಪರಿಸ್ಥಿತಿ ಮೈತ್ರಿ ಸರ್ಕಾರದಲ್ಲಿತ್ತು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಜೆ.ಪಿ. ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ನೀಡಿದ್ದ ಕಾಟಗಳೆಷ್ಟು? ಯಾವ ಕಾಂಗ್ರೆಸ್ ನಾಯಕರು ಹೇಗೆ ಹಿಂಸೆ ನೀಡಿದ್ದರು ಎಂಬದು ತಮಗೆ ಮಾತ್ರ ಚೆನ್ನಾಗಿ ಗೊತ್ತು. ಸಿದ್ದರಾಮಯ್ಯ ನೀಡಿದ ಕಾಟವನ್ನು ಸಹಿಕೊಳ್ಳಲಾಗದೇ ಕುಮಾರಸ್ವಾಮಿ ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀ ನಾಮೆ ಸಲ್ಲಿಸುತ್ತೇನೆ ಎಂದು ತಮ್ಮ ಬಳಿ ಬಂದಿದ್ದರು. ಕುಮಾರಸ್ವಾಮಿ ಅವರ ರಾಜೀನಾಮೆಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದರು. ಮೈತ್ರಿ ಸರ್ಕಾರವನ್ನು ಉರುಳಿಸಿದ ಸಿದ್ದರಾಮಯ್ಯ ಇದೀಗ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನೀಡುತ್ತಿದ್ದ ಹಿಂಸೆಯನ್ನು ಸರ್ಕಾರದಲ್ಲಿದ್ದಾಗ ಹೇಳಲಾಗಲಿಲ್ಲ. ನೋವನ್ನು ಸಹಿಸಿಕೊಂಡೇ ಇರಬೇಕಾದ ಪರಿಸ್ಥಿತಿಯಿತ್ತು. ಪ್ರಾದೇಶಿಕ ಪಕ್ಷವಾಗಿ ಸರ್ಕಾರದಿಂದ ಹೊರಬಂದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕಾಗಿ ನೋವನ್ನು ಸಹಿಸಿಕೊಂಡು ಹೋಗು ಎಂದು ಕುಮಾರಸ್ವಾಮಿಗೆ ಹೇಳಿದ್ದೆ. ಈಗ ಮೈತ್ರಿ ಇಲ್ಲ. ಹೀಗಾಗಿ ನೋವನ್ನು ಬಹಿರಂಗಪಡಿಸುತ್ತಿರು ವದಾಗಿ ದೇವೇಗೌಡರು ಹೇಳಿದರು.
ದಳಪತಿಗಳೇ ಕಾರಣ: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ರೇವಣ್ಣ, ಕುಮಾರಸ್ವಾಮಿ ಕಾರಣ. ಮೈತ್ರಿ ಸರ್ಕಾರ ಪತನಕ್ಕೆ ದಳಪತಿಗಳೇ ಕಾರಣ ವಿನಃ ನಾವಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಏಕಪಕ್ಷೀಯ ನಿರ್ಧಾರ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವದು ಸರಕಾರ ಪತನಕ್ಕೆ ಕಾರಣವಾಯಿತು. ನಮ್ಮ ಸರ್ಕಾರ ಉಳಿಯಬೇಕು ಎಂದು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ಇವರ ಉದ್ದೇಶ ನನಗೆ ಗೊತ್ತಿಲ್ಲ. ನನ್ನ ಮೇಲೆ ಆರೋಪ ಮಾಡಿ ಯಾವ ಪಕ್ಷವನ್ನು ಖುಷಿಪಡಿಸಲು ಹೊರಟಿದ್ದಾರೋ ಎಂದು ವಾಗ್ದಾಳಿ ನಡೆಸಿದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಸ್ವಾಯತ್ತೆ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು ಎಂಬ ದೃಷ್ಟಿಯಲ್ಲಿ ಸರ್ಕಾರ ರಚನೆಗೆ ಒಪ್ಪಿದ್ದೆ. ಆದರೆ ನಾನೇನು ಕುಮಾರಸ್ವಾಮಿ ಸಿಎಂ ಆಗಬಾರದು ಎಂದು ಭಾವಿಸಿಲ್ಲ. ನಾನು 14 ತಿಂಗಳ ಕಾಲ ಸಂಪೂರ್ಣ ಸಹಕಾರ ನೀಡಿದ್ದೆ. ಆದರೆ ದೇವೇಗೌಡರ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು. ರಾಜಕೀಯ ದುರುದ್ದೇಶದಿಂದ ಮಾಡಿರುವಂತಹ ಸುಳ್ಳು ಆರೋಪವಾಗಿದೆ ಎಂದರು. ನನಗೆ, ಅವರಿಗೆ ರಾಜಕೀಯ ವೈರತ್ವ ಎಂದು ತಿಳಿದಿದ್ದಾರೆ. ನಮ್ಮ ಹೈಕಮಾಂಡ್ ತೀರ್ಮಾನವನ್ನು ನಾನು ಒಪ್ಪಿದ್ದೆ. ನಾನು ಅವರ ಕೆಲಸದಲ್ಲಿ ಯಾವ ಹಸ್ತಕ್ಷೇಪವನ್ನೂ ಮಾಡಿಲ್ಲ. ಇವರ ತಪ್ಪು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಬೇಕೆಂಬ ಇಚ್ಛೆಯಿಂದ ಯಡಿಯೂರಪ್ಪ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೇಶದ ರಾಜಕೀಯದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಾಗಲು ಸರಕಾರ ಬೀಳಿಸಿದ ಚರಿತ್ರೆ ಇಲ್ಲ ಎಂದು ತಿರುಗೇಟು ನೀಡಿದರು. ನಾವು ಐದಾರು ಸಮನ್ವಯ ಸಮಿತಿ ಸಭೆಗಳನ್ನು ಮಾಡಿದ್ದೇವು.
(ಮೊದಲ ಪುಟದಿಂದ) ಆದರೆ ಅದರಲ್ಲಿ ಕೈಗೊಂಡ ನಿರ್ಧಾರಗಳನ್ನು ಕುಮಾರಸ್ವಾಮಿ ಜಾರಿಗೊಳಿಸಿಲ್ಲ. ಸಮನ್ವಯ ಸಮಿತಿ ನಿರ್ಧಾರ ಜಾರಿಗೊಳಿಸದೇ ಇದ್ದದ್ದು ಅವರ ತಪ್ಪು. ನಾನು ಸರ್ಕಾರ ಬೀಳಿಸುವ ನೀಚ ರಾಜಕಾರಣ ಮಾಡಲ್ಲ. ದೇವೇಗೌಡರು ಬೇರೆ ಸರಕಾರ ಉರುಳಿಸೋದು ಅವರ ಹುಟ್ಟುಗುಣ. ಧರಂ ಸಿಂಗ್ಗೆ ಬೆಂಬಲ ಕೊಟ್ಟರು, ನಂತರ ಸರಕಾರ ಬೀಳಿಸಿದವರು ಯಾರು?
ಬೊಮ್ಮಾಯಿ ಸರಕಾರ ಬೀಳಿಸಿದವರು ಯಾರು? ಇವತ್ತು ಏನಾದರು ಬಿಜೆಪಿ ಅಧಿಕಾರಕ್ಕೆ ಬರಲು ದೇವೇಗೌಡರು ಮತ್ತು ಕುಮಾರಸ್ವಾಮಿ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದರು. ನಾನು ಯಾವತ್ತೂ ಅಧಿಕಾರದ ಹಿಂದೆ ಬಿದ್ದಿಲ್ಲ. ರಾತ್ರೋರಾತ್ರಿ ಬಿಜೆಪಿ ಕ್ಯಾಂಪ್ ಸೇರಿಕೊಂಡುವರು ಯಾರು? ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಜೆಡಿಎಸ್ನವರೇ ಕಾರಣ. 20;20 ತಿಂಗಳ ಅಧಿಕಾರ ಹಂಚಿಕೆಯಲ್ಲಿ ಕೊಟ್ಟ ಮಾತನ್ನು ತಪ್ಪಿ ವಚನಭ್ರಷ್ಟರಾದವರು ಯಾರು? ಇವರಿಗೆ ಯಾವ ಪಕ್ಷ ಬೆಂಬಲ ಕೊಡುತ್ತೋ ಆ ಪಕ್ಷದ ಬೆಂಬಲ ವಾಪಸ್ ಪಡೆಯುವುದೇ ದೇವೇಗೌಡ ಮತ್ತು ಮಕ್ಕಳ ಹುಟ್ಟುಗುಣ ಎಂದು ಗುಡುಗಿದರು.
ಆರೊಪಗಳಲ್ಲಿ ಹುರುಳಿಲ್ಲ: ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮಾಡಿರುವ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಲ್ಲಗಳೆದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕೆಲವು ಸ್ಥಳೀಯ ಸಮಸ್ಯೆಗಳಿಂದಾಗಿ ಸೋಲಾಯಿತೇ ವಿನಾ: ಜೆಡಿಎಸ್ ಸೋಲಿಗೆ ಕಾಂಗ್ರೆಸ್ ಕಾರಣವಲ್ಲ ಎಂದರು. ದೇವೇಗೌಡರು ಈ ರೀತಿಯ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಸಿದ್ದರಾಮಯ್ಯ ಸರಿಯಾಗಿಯೇ ಹೇಳಿದ್ದಾರೆ. ಅವರ ಬಗ್ಗೆ ಆರೋಪ ಮಾಡಿದ್ದರಿಂದ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯ ಅಧಿಕಾರ ಹಂಚಿಕೆ, ಶಾಸಕರ ಕೆಲಸಗಳ ಬಗ್ಗೆ ಸಮಸ್ಯೆಗಳು ಇತ್ತು. ಆದರೆ, ವೈಯಕ್ತಿಕ ವಿಚಾರಕ್ಕೆ ಯಾವತ್ತೂ ತೊಂದರೆ ನೀಡಿರಲಿಲ್ಲ. ಸರ್ಕಾರ ಪತನಗೊಳ್ಳುವ ಕೊನೆ ಗಳಿಗೆಯವರೆಗೂ ಎಲ್ಲಾ ರೀತಿಯ ಸಹಕಾರ ನೀಡಲಾಗಿತ್ತು. ಆದರೂ, ಕಾಂಗ್ರೆಸ್ ಮೇಲೆ ವಿನಾಕಾರಣ ಆರೋಪ ಮಾಡಲಾಗುತಿತ್ತು. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಕಣ್ಣೀರಿಡುವ ಮೂಲಕ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಇದು ನಾಟಕೀಯವಾಗಿದ್ದರೂ ಅಸಾಮಥ್ರ್ಯತತೆಯನ್ನು ತೋರಿಸುತಿತ್ತು ಎಂದು ಟೀಕಿಸಿದರು. ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಯಬೇಕಾ? ಅಥವಾ ಕಡಿದುಕೊಳ್ಳಬೇಕಾ ಎಂಬದನ್ನು ನಿರ್ಧರಿಸಲು ಸಕಾಲವಲ್ಲ, ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಉತ್ತರಿಸಲು ಇದು ಸಕಾಲವಲ್ಲ: ಮೈತ್ರಿ ಸರ್ಕಾರದ ಪತನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಆರೋಪ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರತ್ಯಾರೋಪ ರಾಜ್ಯ ರಾಜಕಾರಣದಲ್ಲಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ನೇರ ಕಾರಣ, ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ ಎಂದಿದ್ದಾರೆ. ದೇಶದ ರಾಜಕೀಯ ವಿದ್ಯಮಾನಗಳು ಏಕರೂಪವಾಗಿದೆ. ಜಾತ್ಯತೀತ ಶಕ್ತಿಗಳು ಒಗ್ಗೂಡುವ ಇಂತಹ ಸಮಯದಲ್ಲಿ ಒಡಕಿನ ಮಾತುಗಳು ಆರೋಗ್ಯಕ್ಕರವಲ್ಲ. ಕಾಲ ಕೂಡಿ ಬಂದಾಗ ಎಲ್ಲದ್ದಕ್ಕೂ ಉತ್ತರಿಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.