ಮಡಿಕೇರಿ, ಆ.23: 2019ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ತೆರೆಯಲಾದ ಪರಿಹಾರ ಕೇಂದ್ರಗಳು ಮಳೆ ಕಡಿಮೆಯಾಗಿರುವದರಿಂದ ಮುಚ್ಚಲ್ಪಡುತ್ತಿದ್ದು, ಪ್ರಸ್ತುತ ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ 4 ಪರಿಹಾರ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪರಿಹಾರ ಕೇಂದ್ರಗಳಲ್ಲಿ 37 ಕುಟುಂಬಗಳ 149 ಸದಸ್ಯರು ಆಶ್ರಯ ಪಡೆದಿರುತ್ತಾರೆ.

ಈ ಸಾಲಿನ ಪ್ರಕೃತಿ ವಿಕೋಪದಿಂದ ಜನವರಿ 1 ರಿಂದ ಇಲ್ಲಿಯವರೆಗೆ ಒಟ್ಟು 14 ಮಾನವ ಜೀವಹಾನಿ ಆಗಿದ್ದು, 4 ಜನರು ಕಣ್ಮರೆಯಾಗಿರುತ್ತಾರೆ.

ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ಅತಿವೃಷ್ಟಿಯಿಂದ ಬಟ್ಟೆ ಮತ್ತು ದಿನಬಳಕೆ ವಸ್ತುಗಳನ್ನು ಕಳೆದುಕೊಂಡ ಕುಟುಂಬಕ್ಕೆ ತಲಾ ರೂ. 3,800 ರಂತೆ ಪರಿಹಾರ ಪಾವತಿಸಲು ಅವಕಾಶವಿರುತ್ತದೆ. ಹಾಗೆಯೇ ರಾಜ್ಯ ಸರ್ಕಾರದ ಆದೇಶ ಸಂ;ಆರ್‍ಡಿ/91/ಟಿಎನ್‍ಆರ್/2019 ದಿ : 14-08-2019ರಲ್ಲಿ ಬಟ್ಟೆ ಮತ್ತು ದಿನಬಳಕೆಯ ವಸ್ತುಗಳನ್ನು ಕಳೆದುಕೊಂಡು ಕುಟುಂಬಕ್ಕೆ ಪ್ರಕೃತಿ ವಿಕೋಪ ಮಾರ್ಗಸೂಚಿಯನುಸಾರ ಪ್ರಸ್ತುತ ಜಾರಿಯಲ್ಲಿರುವ ರೂ. 3800 ರೊಂದಿಗೆ ಹೆಚ್ಚುವರಿಯಾಗಿ ರೂ.6,200 ಗಳನ್ನು ಸೇರಿ ರೂ.10,000 ಪರಿಹಾರವನ್ನು ನೀಡಲು ಸರ್ಕಾರವು ಆದೇಶಿಸಿರುತ್ತದೆ.

ಸರ್ಕಾರದ ಆದೇಶದಂತೆ ಜಿಲ್ಲೆಯ ಮೂರು ತಾಲೂಕಿನ ಪರಿಹಾರ ಕೇಂದ್ರಗಳಲ್ಲಿದ್ದ ಮತ್ತು ಬಂಧುಗಳ ಮನೆಯಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಜಿಲ್ಲೆಯ ಒಟ್ಟು 4,148 ಕುಟುಂಬಗಳಿಗೆ ತಲಾ ರೂ.10,000 ವನ್ನು ವಿತರಿಸಲು ಮಂಜೂರಾತಿ ನೀಡಲಾಗಿರುತ್ತದೆ.

ಅದರಂತೆ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ 4,148 ಸಂತ್ರಸ್ತ ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಯನ್ನೊಳಗೊಂಡ ಆಹಾರದ ಕಿಟ್ಟ್‍ಗಳೊಂದಿಗೆ ಚೆಕ್‍ಗಳನ್ನು ವಿತರಿಸಲಾಗುತ್ತಿದ್ದು, ತಾ. 24 ರೊಳಗೆ ಚೆಕ್ ವಿತರಣೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.