ಕುಶಾಲನಗರ, ಆ. 23: ಜಿಲ್ಲೆಯಲ್ಲಿ ಕಳೆದ ಬಾರಿ ಪ್ರಕೃತಿ ವಿಕೋಪದಲ್ಲಿ ಮನೆ, ಆಸ್ತಿ ಕಳೆದುಕೊಂಡವರಿಗೆ ಸಿ ಮತ್ತು ಡಿ ಲ್ಯಾಂಡ್‍ನಲ್ಲಿ ಜಾಗ ಒದಗಿಸಿಕೊಡಲು ಚಿಂತನೆ ಹರಿಸಲಾಗಿದ್ದು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಹೇಳಿದರು.
ಕುಶಾಲನಗರ ಜಿಎಂಪಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೆರೆ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್ ಮತ್ತು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ ರಸ್ತೆ ಮತ್ತಿತರ ವ್ಯವಸ್ಥೆಗಳ ಪುನರ್ ನಿರ್ಮಾಣಕ್ಕೆ 540 ಕೋಟಿ ರೂ.ಗಳನ್ನು ಕೊಡಗು ಜಿಲ್ಲಾಡಳಿತಕ್ಕೆ ಬಿಡುಗಡೆಗೊಳಿಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದಾರೆ. ಜಾಗ ಕಳೆದುಕೊಂಡವರಿಗೆ ಸಿ ಮತ್ತು ಡಿ ಲ್ಯಾಂಡ್‍ನಲ್ಲಿ ಜಾಗ ಒದಗಿಸಿಕೊಡಬೇಕೆಂದು ತಾನು ಚಿಂತನೆ ಹರಿಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ವಿಷಯ ಪ್ರಸ್ತಾಪಿಸಲಾಗುವದು. ಈ ವರ್ಷ ನೆರೆಯಿಂದ ಸಂತ್ರಸ್ತರಾದವರಿಗೆ ಪ್ರಾಥಮಿಕ ಹಂತದಲ್ಲಿ ರೂ. 10 ಸಾವಿರ ನಗದು ಮತ್ತು ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ ಮನೆಗಳ ಪುನರ್ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ರೂ. 6 ಲಕ್ಷ ನೀಡಲು ಸರಕಾರ ನಿರ್ಧರಿಸಿದೆ ಎಂದರು.
ಕುಶಾಲನಗರ ಪಟ್ಟಣ ವ್ಯಾಪ್ತಿಯ 5 ಮತ್ತು 10ನೇ ವಾರ್ಡ್‍ನ 158 ಮಂದಿಗೆ ತಲಾ 10 ಸಾವಿರ ರೂ.ಗಳ ಮೊತ್ತದ ಚೆಕ್ ಮತ್ತು ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.
ಪಪಂ ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ನೆರೆ ಸಂದರ್ಭ ಜಿಲ್ಲೆಯ ವಿವಿಧೆಡೆ ರಕ್ಷಣಾ ಕಾರ್ಯದಲ್ಲಿ ಖುದ್ದು ಪಾಲ್ಗೊಂಡು ಅವಿರತ ಶ್ರಮಿಸಿದ ಶಾಸಕ ಅಪ್ಪಚ್ಚುರಂಜನ್ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಮಂಜುಳಾ, ಕುಶಾಲನಗರ ಪಪಂ ಸದಸ್ಯರಾದ ವಿ.ಎಸ್. ಆನಂದಕುಮಾರ್, ಡಿ.ಕೆ.ತಿಮ್ಮಪ್ಪ, ಸುರಯ್ಯಭಾನು, ಜಯವರ್ಧನ, ಅಮೃತ್‍ರಾಜ್, ತಹಶೀಲ್ದಾರ್ ಗೋವಿಂದರಾಜು, ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮತ್ತಿತರರು ಇದ್ದರು.