ಮಡಿಕೇರಿ ಆ.23 : ಹಲವಾರು ಸಮಸ್ಯೆಗಳು ಹಾಗೂ ಸಂಕಷ್ಟಗಳನ್ನು ಎದುರಿಸುತ್ತಿರುವ ಕೊಡಗಿನ ಜನತೆಯ ಕಣ್ಣೀರು ಒರೆಸುವ ದೃಷ್ಟಿಯಿಂದ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡುವದರೊಂದಿಗೆ ಕೊಡಗಿನ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿರುವ ಭಾಗಮಂಡಲ ಮತ್ತು ನಾಪೋಕ್ಲು ಹೋಬಳಿಯ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತಪ್ಪಿದಲ್ಲಿ ಕೊಡಗು ‘ಸಿ’ ರಾಜ್ಯಕ್ಕಾಗಿ ಹೋರಾಟ ಆರಂಭಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಗಮಂಡಲದ ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಕುದುಕುಳಿ ಭರತ್ ಅವರು, ಕೊಡಗಿನ ಶಾಸಕರಿಗೆ ಉಸ್ತುವಾರಿ ಸಚಿವರ ಜವಾಬ್ದಾರಿ ನೀಡಬೇಕು, ತಪ್ಪಿದಲ್ಲಿ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿ ಕೊಡಗಿಗೆ ಬಂದರೆ ಘೇರಾವ್ ಹಾಕುವದಾಗಿ ಎಚ್ಚರಿಕೆ ನೀಡಿದರು.
ಕೊಡಗು ಒಂದೆಡೆ ವನ್ಯಪ್ರಾಣಿಗಳ ಹಾವಳಿ, ಮತ್ತೊಂದೆಡೆ ಪ್ರಕೃತಿ ವಿಕೋಪ, ಮಗದೊಂದೆಡೆ ಜಮೀನುಗಳ
(ಮೊದಲ ಪುಟದಿಂದ) ದಾಖಲೆಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಈ ಸಮಸ್ಯೆಗಳು ಹೊರಗಿನ ಜನಪ್ರತಿನಿಧಿಗಳಿಗೆ ಅರ್ಥವಾಗುವದಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನ ಶಾಸಕರಿಗೇ ಕೊಡಗಿನ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಿಂದ ಎಂ.ಪಿ.ಅಪ್ಪಚ್ಚುರಂಜನ್ ಅವರು 5 ಬಾರಿ ಹಾಗೂ ಕೆ.ಜಿ.ಬೋಪಯ್ಯ ಅವರು ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಪ್ರಾಮಾಣಿಕವಾಗಿ ದುಡಿದು ಹೆಸರುಗಳಿಸಿದ್ದಾರೆ. ಜಿಲ್ಲೆಯ ಜನಸಾಮಾನ್ಯ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗಿನ ಒಬ್ಬರಿಗಾದರೂ ಸಚಿವ ಸ್ಥಾನ ನೀಡಿ ಅವರನ್ನು ಕೊಡಗಿನ ಉಸ್ತುವಾರಿ ಯನ್ನಾಗಿ ನೇಮಕ ಮಾಡಬೇಕು ಎಂದರು.
ಕೊಡಗಿನಲ್ಲಿ ಪರಿಸರವಾದಿ ಗಳೆಂದು ಹೇಳಿಕೊಳ್ಳುತ್ತಿರುವ ಕೆಲವೇ ವ್ಯಕ್ತಿಗಳು ಬೆಳೆಗಾರರ ಕಾಫಿ ತೋಟ ಮತ್ತು ಮರಗಳಿರುವ ಏಲಕ್ಕಿ ಮತ್ತು ಇತರ ಜಮೀನುಗಳನ್ನು ಅರಣ್ಯವೆಂದು ಘೋಷಿಸುವಂತೆ ನ್ಯಾಯಾಲಯಗಳಲ್ಲಿ ದಾವೆ ಹೂಡುತ್ತಿದ್ದಾರೆ. ಇದರ ಪರಿಣಾಮವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಕೃಷಿಕರಿಗೆ ಜಮೀನಿನ ದಾಖಲೆಗಳನ್ನು ನೀಡದೆ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲೆಯ ಜನತೆಯ ಸಂಪರ್ಕಕ್ಕೆ ಇರುವ ಕಡಮಕಲ್ಲು, ಕರಿಕೆ, ಮಾಕುಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಿದ್ದು, ಮಡಿಕೇರಿ ನಗರದೊಳಗೆ ಮನೆಗಳು ಇರುವ ಪ್ರದೇಶವನ್ನೇ ಅರಣ್ಯವೆಂದು ಘೋಷಿಸಿರುವ ಪರಿಸರವಾದಿಯೊಬ್ಬರು ಆ ಮನೆಗಳನ್ನು ತೆರವುಗೊಳಿಸಬೇಕೆಂದು ರಾಜ್ಯ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದರ ಜೊತೆಗೆ ಆನೆ, ಹುಲಿ ಮುಂತಾದ ವನ್ಯಪ್ರಾಣಿಗಳ ಸಂಖ್ಯೆ ಮಿತಿ ಮೀರಿದ್ದು, ಕೃಷಿಕರು ಕಂಗಾಲಾಗಿದ್ದಾರೆ ಎಂದ ಭರತ್, ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರಿಬ್ಬರು ಜನತೆಗೆ ಬೆಂಬಲವಾಗಿ ನಿಂತಿದ್ದು, ಹೊರ ಜಿಲ್ಲೆಯ ಸಚಿವರ ಅಗತ್ಯವಿಲ್ಲ ಎಂದರು.
1956ರವರೆಗೂ ಸಿ ರಾಜ್ಯವಾಗಿದ್ದ ಕೊಡಗು ಕರ್ನಾಟಕದೊಂದಿಗೆ ವಿಲೀನವಾಗಿದ್ದರೂ, ಕೊಡಗಿನ ಭೂ ದಾಖಲೆಗಳು ಇನ್ನು ಕೂಡಾ ಕೊಡಗಿನ ರಾಜರ ಕಾಲದಲ್ಲಿ ನೀಡಿದ ಟೆನ್ಯೂರ್ ಪದ್ಧತಿಯಲ್ಲೇ ಇವೆ. ಕರ್ನಾಟಕದಲ್ಲಿ ಭೂ ಕಂದಾಯ ಕಾಯ್ದೆ ಜಾರಿಯಾಗಿ ಇತರ ಜಿಲ್ಲೆಗಳಲ್ಲಿ ಅದು ಅನುಷ್ಠಾನಗೊಂಡಿದ್ದರೂ, ಕೊಡಗಿನ ಕಂದಾಯ ಇಲಾಖೆಯಲ್ಲಿ ಇನ್ನು ಕೂಡಾ ಹಳೆಯ ಟೆನ್ಯೂರ್ಗಳೇ ಉಳಿದುಕೊಂಡಿವೆ. ರಾಜರ ಕಾಲದಲ್ಲಿ ನೀಡಲಾದ ಜಮ್ಮಾ, ಸಾಗು, ಉಂಬಳಿ, ಬಟ್ಟಿಮಾನಿ, ನಾಯಿಮಣ್ಣು ಮತ್ತಿತರ 20 ವರ್ಗದ ಜಮೀನುಗಳು ಕೊಡಗಿನಲ್ಲಿದ್ದು, ಇದು ಯಾವದೂ ಕರ್ನಾಟಕದ ಭೂ ದಾಖಲೆಗಳಲ್ಲಿ ಕೊಡಗಿನ ರೈತರಿಗೆ ಸಿಗುತ್ತಿಲ್ಲ. ಅಲ್ಲದೆ ಕೊಡಗಿನ ಕಂದಾಯ ಇಲಾಖೆಗೆ ನೀಡಲಾದ ಕಂಪ್ಯೂಟರ್ಗಳಲ್ಲೂ ಇದನ್ನು ದಾಖಲಿಸಿಲ್ಲ. ಇದರಿಂದಾಗಿ ಕೊಡಗಿನ ಹಿಡುವಳಿದಾರರು ತಮ್ಮ ಸ್ವಂತ ಜಮೀನಿನ ದಾಖಲೆಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಹೇಳಿದರು. ಕೊಡಗಿನ ಜಮೀನಿನ ದಾಖಲೆಗಳ ಮೂಲ ಪ್ರತಿಗಳು ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಮದ್ರಾಸ್ನ ಪತ್ರಾಗಾರದಲ್ಲಿರಿಸಲಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಕೊಡಗಿನ ರೈತರು ಪಡೆಯದಂತಾಗಿದೆ. ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಕೊಡಗಿನವರಿಗೇ ಮಂತ್ರಿ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಚಿವ ಸ್ಥಾನ ದೊರಕದಿದ್ದಲ್ಲಿ ಮತ್ತೊಮ್ಮೆ ‘ಸಿ’ ರಾಜ್ಯಕ್ಕಾಗಿ ಬೇಡಿಕೆ ಮುಂದಿಟ್ಟು ರಾಜಕೀಯ ರಹಿತವಾದ ಮತ್ತು ಜಾತ್ಯತೀತವಾದ ಹೋರಾಟ ನಡೆಸುವದಾಗಿ ಭರತ್ ಎಚ್ಚರಿಕೆ ನೀಡಿದರು.
ಸೇವ್ ಕೊಡಗು ಸಂಘಟನೆಯ ಪ್ರಮುಖ ಬಿ.ಟಿ. ದಿನೇಶ್ ಮಾತನಾಡಿ, ಭಾರತ ದೇಶದಲ್ಲಿ “ಸಿ” ರಾಜ್ಯದ ಸ್ಥಾನಮಾನವನ್ನು ಕಳೆದುಕೊಂಡ ಏಕೈಕ ಪ್ರದೇಶ ಕೊಡಗು ಆಗಿದ್ದು, ಇದರ ಋಣವನ್ನು ತೀರಿಸುವ ಕಾರ್ಯವನ್ನು ಪ್ರತಿಯೊಂದು ಸರಕಾರ ಮಾಡಬೇಕಾಗಿದೆ. ಕೊಡಗಿಗೆ ಪ್ರಥಮ ಆದ್ಯತೆ ನೀಡದಿದ್ದಲ್ಲಿ ರಾಜಕೀಯ ಪಕ್ಷಗಳಿಗೆ ದೋಷ ತಟ್ಟಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ ಇಬ್ಬರು ಶಾಸಕರಿಗೂ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಮತ್ತೊಬ್ಬ ಪ್ರಮುಖ ಜಿನ್ನುನಾಣಯ್ಯ ಮಾತನಾಡಿ ಹೊರ ಜಿಲ್ಲೆಯ ಸಚಿವರುಗಳಿಗೆ ಕೊಡಗಿನ ಸಮಸ್ಯೆಗಳಿಗೆ ಸಮಗ್ರವಾಗಿ ಸ್ಪಂದಿಸಲು ಸಾಧ್ಯವಿಲ್ಲ. ಆದರೆ ಸ್ಥಳೀಯರೇ ಆದ ಶಾಸಕದ್ವಯರಿಗೆ ಜಿಲ್ಲೆಯ ಮೂಲೆ ಮೂಲೆಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ತಿಳಿದಿರುವದರಿಂದ ಸಮಸ್ಯೆಗೆ ಪರಿಹಾರ ಮತ್ತು ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರು.
ಭಾಗಮಂಡಲ ಮತ್ತು ಸುತ್ತಮುತ್ತಲ ಗ್ರಾಮಗಳ ನಾಗರಿಕರಾದ ಅಮೆ ಬಾಲಕೃಷ್ಣ, ಕೀರ್ತಿಕುಮಾರ್ ಹಾಗೂ ಪುರುಷೋತ್ತಮ ಮಾತನಾಡಿ ಸಚಿವ ಸ್ಥಾನಕ್ಕಾಗಿ ಒತ್ತಾಯಿಸಿದರು.