ಮಡಿಕೇರಿ, ಆ. 23: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಈ ತನಕ ಸರಾಸರಿ 83.09 ಇಂಚು ಮಳೆಯಾಗಿದೆ. 2018ರ ವರ್ಷಕ್ಕೆ ಹೋಲಿಸಿದರೆ; 63.66 ಇಂಚು ಮಳೆಯ ಪ್ರಮಾಣ ಕಡಿಮೆ ಇದೆಯಾದರೂ ಈ ಬಾರಿ ಕೇವಲ ಆಗಸ್ಟ್ ತಿಂಗಳ ಮೊದಲ ವಾರದಿಂದ ಜಿಲ್ಲೆಯಲ್ಲಿ ವರುಣ ತನ್ನ ಆರ್ಭಟ ತೋರುವದರೊಂದಿಗೆ ಕಳೆದ ವರ್ಷದಂತೆ ಈ ಸಾಲಿನಲ್ಲಿ ಹಲವಾರು ದುರಂತಗಳು ಘಟಿಸಿ ಹೋಗಿದೆ.ಕಳೆದ ಸಾಲಿನಲ್ಲಿ ಬೇಸಿಗೆಯ ಸಂದರ್ಭದಿಂದಲೇ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು; ಇದು ನಂತರದ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಪ್ರಸಕ್ತ ವರ್ಷ ಆಗಸ್ಟ್ ತನಕವೂ ಕ್ಷೀಣಗೊಂಡಂತ್ತಿದ್ದ ಮಳೆಗಾಲ ದಿಂದಾಗಿ ಆ ಸಂದರ್ಭದಲ್ಲಿ ಬರಗಾಲದ ಸನ್ನಿವೇಶದ ಭೀತಿ ಮೂಡಿಸಿತ್ತಾದರೂ ಆಗಸ್ಟ್ ಮೊದಲ ವಾರದಿಂದ ಕೇವಲ 20 ದಿನಗಳಲ್ಲಿ ಜಿಲ್ಲೆ ವಾಯು - ವರುಣನ ಅಬ್ಬರಕ್ಕೆ ನಲುಗಿರುವದು ಈ ಬಾರಿಯ ದುರಂತವೆನ್ನಬಹುದಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಈ ವೇಳೆಗಾಗಲೇ ಸರಾಸರಿ 210 ಇಂಚಿನಷ್ಟು ಭಾರೀ ಮಳೆಯಾಗಿದ್ದರೆ, ಈ ವರ್ಷ 110.34 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಈ ತನಕ 84.30 ಇಂಚು ಮಳೆಯಾಗಿದೆ. ಕಳೆದ ಸಾಲಿನಲ್ಲಿ ಈ ವೇಳೆಗೆ 112.15 ಇಂಚಿನಷ್ಟಾಗಿದ್ದು, ಈ ಬಾರಿ ಕೇವಲ 27 ಇಂಚು ಮಾತ್ರ ಈ ತಾಲೂಕಿನಲ್ಲಿ ಕಡಿಮೆ ಗೋಚರಿಸಿದೆ. ಸೋಮವಾರ ಪೇಟೆ ತಾಲೂಕಿನಲ್ಲಿ ಈ ಬಾರಿ ಇಲ್ಲಿಯವರೆಗೆ 54.64 ಇಂಚು ಮಳೆಯಾಗಿದ್ದರೆ; ಕಳೆದ ವರ್ಷ ಈ ಪ್ರಮಾಣ 117.66 ಇಂಚಿನಷ್ಟಾಗಿತ್ತು.

ಜಿಲ್ಲಾ ಕೇಂದ್ರದಲ್ಲಿ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಪ್ರಸಕ್ತ ವರ್ಷ ಈ ತನಕ 88.44 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ 210 ಇಂಚಿನಷ್ಟಾಗಿತ್ತು.