ಸೋಮವಾರಪೇಟೆ, ಆ. 23: ಗೌರಿ ಗಣೇಶೋತ್ಸವದ ಹಿನ್ನೆಲೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲ್ಲಿನ ಆರಕ್ಷಕ ಠಾಣೆಯಲ್ಲಿ ಸಭೆ ನಡೆಯಿತು.
ಗೌರಿ ಗಣೇಶ ಹಬ್ಬದ ಆಚರಣೆಯಲ್ಲಿ ಸಮಿತಿಯವರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ವೃತ್ತ ನೀರಿಕ್ಷಕ ನಂಜುಂಡೇಗೌಡ, ಉತ್ಸವ ಮೂರ್ತಿಗಳ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ಠಾಣೆಗೆ ಮಾಹಿತಿ ನೀಡಬೇಕು, ಭದ್ರತೆಯ ದೃಷ್ಟಿಯಿಂದ ಪೆಂಡಾಲುಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಸೆರೆ ಹಿಡಿಯಲು ಸಿ.ಸಿ.ಟಿ.ವಿ.ಅಳವಡಿಸಬೇಕೆಂದು ಸೂಚಿಸಿದರು.
ಗೌರಿ ಗಣೇಶ ವಿಸರ್ಜನೆ ವೇಳೆ ನುರಿತ ಈಜುಗಾರರನ್ನೆ ನೇಮಿಸಿಕೊಳ್ಳಬೇಕು, ಮುನ್ನೆಚ್ಚರಿಕಾ ಕ್ರಮವಾಗಿ ಲೈಫ್ ಜಾಕೆಟ್‍ಗಳನ್ನು ಕಡ್ಡಾಯವಾಗಿ ಉಪಯೋಗಿಸುವದೂ ಸೇರಿದಂತೆ ಇತರ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪನಿರೀಕ್ಷಕ ಶಿವಶಂಕರ್ ಉಪಸ್ಥಿತರಿದ್ದರು. ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗುವ ಸಮಿತಿ ಪದಾಧಿಕಾರಿಗಳು,ಸಾರ್ವಜನಿಕ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣಿ, ಸೋಮೇಶ್ವರ ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್. ಡಿ. ವಿಜೇತ್, ಪಿ.ಕೆ. ಚಂದ್ರು, ಅಭಿನಂದನ್, ರವಿ, ಮಹೇಶ್, ನಾರಾಯಣ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.