ಮಡಿಕೇರಿ, ಆ. 23: ಪ್ರಸಕ್ತ (2019-20) ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆದಿದ್ದ ಕೃಷಿ, ತೋಟಗಾರಿಕೆ, ಕಾಫಿ ಹಾಗೂ ಸಾಂಬಾರ ಬೆಳೆಗಳು ಹಾನಿಗೊಳಗಾಗಿರುತ್ತದೆ. ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಲು ರೈತ ಬಾಂಧವರು ನಿಗದಿತ ಅರ್ಜಿ ನಮೂನೆಯಲ್ಲಿ ತಮ್ಮ ಬೆಳೆ ನಷ್ಟದ ವಿವರಗಳನ್ನು ಆಧಾರ್ ಸಂಖ್ಯೆ ಹಾಗೂ ಆಧಾರ್ ಸೀಡ್ ಆದ ಬ್ಯಾಂಕ್ ಖಾತೆ ವಿವರಗಳೊಂದಿಗೆ ತಮ್ಮ ಹತ್ತಿರದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ನಾಡಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ತಾ. 31 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗಳು hಣಣಠಿs://ಞoಜಚಿgu.ಟಿiಛಿ.iಟಿ ಅಂತರ್ಜಾಲ ತಾಣದಲ್ಲಿ ಹಾಗೂ ನಾಡ ಕಚೇರಿಗಳಲ್ಲಿ ಲಭ್ಯವಿದೆ.
ಪರಿಹಾರ ವಿತರಣೆಗೆ ಕಂದಾಯಕ್ಕೆ ಬಾರದ ಬಾಣೆ ಜಮೀನುಗಳು, ಸಾಂಸ್ಥಿಕ ಒಡೆತನದ ಜಮೀನುಗಳು, ಶೇ. 33 ಕ್ಕಿಂತ ಕಡಿಮೆ ಬೆಳೆ ಹಾನಿಯಾದ ಪ್ರಕರಣಗಳು, ಸಕ್ರಮಗೊಳ್ಳದ ಸರ್ಕಾರಿ/ ಅರಣ್ಯ ಇಲಾಖೆಯ ಜಮೀನುಗಳು, ಮಾಲೀಕತ್ವವನ್ನು ಸಾಬೀತುಪಡಿಸಲು ಮಾನ್ಯ ಮಾಡಿದ ದಾಖಲೆಗಳನ್ನು ಹೊಂದಿರದ ರೈತರು ಹೊರತುಪಡಿಸಿ, ಬೆಳೆಹಾನಿಗೊಳಗಾದ ಎಲ್ಲಾ ರೈತರು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.