ಸಿದ್ದಾಪುರ, ಆ. 22: ಪ್ರವಾಹದ ನಂತರ ಕರಡಿಗೋಡು, ಗುಹ್ಯ ಸೇರಿದಂತೆ ನದಿ ದಡದ ಮನೆಗಳ ಮುಂಭಾಗದಲ್ಲಿ ರಾಶಿ ಗಟ್ಟಲೆ ತ್ಯಾಜ್ಯಗಳು ಬಂದು ಕೂಡಿರುವದರಿಂದ ದುರ್ನಾತದ ಜೊತೆಗೆ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ.
ಈ ಭಾಗದಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಕೆಲವರಲ್ಲಿ ಜ್ವರದ ತೀವ್ರತೆ ಹೆಚ್ಚಾಗಿದೆ. ತ್ಯಾಜ್ಯ ವಿಲೇವಾರಿ ಮಾಡುವಂತೆ ಸ್ಥಳೀಯ ಗ್ರಾಮ ಪಂಚಾಯತಿಗೆ ಮನವಿ ಮಾಡಿದರೂ ಯಾವದೇ ರೀತಿಯ ಕ್ರಮಕೈಗೊಳ್ಳದೆ ಇರುವದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವದರಿಂದ ಕೂಡಲೇ ತ್ಯಾಜ್ಯ ವಿಲೇವಾರಿ ಮಾಡುವಂತೆ ಕರಡಿಗೋಡು ನಿವಾಸಿ ಕುಕ್ಕನೂರು ಸೂರಜ್ ಒತ್ತಾಯಿಸಿದ್ದಾರೆ.