ಗೋಣಿಕೊಪ್ಪಲು, ಆ. 22: ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ತೆರಳಲು ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು (55), ವರಲಕ್ಷ್ಮಿ (58) ಎಂಬ ಎರಡು ಆನೆಗಳು ಬುಧವಾರ ಸಂಜೆ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿದವು.
ಅಭಿಮನ್ಯು ಆನೆಯ ಮಾವುತ ವಸಂತ, ಕಾವಾಡಿ ರಾಜು,ವರಲಕ್ಷ್ಮಿ ಆನೆಯ ಮಾವುತ ರವಿ.ಕಾವಾಡಿ ಮಾದೇಶ ಆನೆಗಳೊಂದಿಗೆ ತೆರಳಿದರು. ಅಭಿಮನ್ಯು ಆನೆ ಕಳೆದ 10 ವರ್ಷಗಳಿಂದ ದಸರಾ ಉತ್ಸವಕ್ಕೆ ತೆರಳುತ್ತಿದ್ದರೆ, ವರಲಕ್ಷ್ಮಿ ಆನೆ 6 ವರ್ಷಗಳಿಂದ ತೆರಳುತ್ತಿದೆ. ಮತ್ತಿಗೋಡು ಶಿಬಿರದಿಂದ ಹೊರಟ ಆನೆ ವೀರನಹೊಸಳ್ಳಿಯಿಂದ ಹೊರಡುವ ಗಜಪಯಣದಲ್ಲಿ ಇತರ ಆನೆಗಳೊಂದಿಗೆ ಕೂಡಿಕೊಳ್ಳಲಿವೆ.
ವರಲಕ್ಷ್ಮಿ ಮತ್ತು ಅಭಿಮನ್ಯು ಆನೆಗೆ ಶಿಬಿರದ ಮಾವುತ ಹಾಗೂ ಕಾವಾಡಿಗಳ ಕುಟುಂಬ ಮತ್ತು ಅರಣ್ಯ ಸಿಬ್ಬಂದಿ ಅಲಂಕಾರ ಮಾಡಿ, ಪೂಜಿಸಿ ಬೀಳ್ಕೊಟ್ಟರು. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜಿಬುಲ್ ರೆಹಮಾನ್ ಆನೆಗಳ ಆರೋಗ್ಯವನ್ನು ಪರೀಕ್ಷಿಸಿದರು. ವಲಯ ಅರಣ್ಯಾಧಿ ಕಾರಿ ಶಿವಾನಂದ್ ಲಿಂಗಾಣಿ ಹಾಜರಿದ್ದರು. -ಎನ್.ಎನ್. ದಿನೇಶ್